ಭಾರತದ ಮಹಾಕಾವ್ಯ ರಾಮಾಯಣ ಆಧಾರಿತ ಪೌರಾಣಿಕ ಚಿತ್ರ ಆದಿಪುರುಷ್ ಇಂದು ಪಂಚಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಸುಮಾರು 500 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಭಾರತದಾದ್ಯಂತ ಇಂದು 7,000 ಹಾಗೂ ವಿದೇಶಗಳಲ್ಲಿ 3000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ರಾಘವ್ ಪಾತ್ರದಲ್ಲಿ, ಬಾಲಿವುಡ್ ಬಹುಬೇಡಿಕೆ ನಟಿ ಕೃತಿ ಸನೋನ್ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಲಂಕೇಶ್ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ, ದೇವ್ದತ್ತ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳನ್ನು ನೋಡಿದ ಅಭಿಮಾನಿಗಳು ಟ್ವಿಟರ್ನಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆದಿಪುರುಷ್ ಟ್ವಿಟರ್ ವಿಮರ್ಶೆ: ಆದಿಪುರುಷ್ ಪ್ರೀಮಿಯರ್ ಶೋಗಳನ್ನು ನೋಡಿದವರ ಪೈಕಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ಬಗ್ಗೆ ಗುಣಗಾನ ಮಾಡಿದ್ದಾರೆ. 'ಕಲ್ಪನೆಗೂ ನಿಲುಕದ ದೃಶ್ಯಗಳಿರುವ ಆದಿಪುರುಷ್ ಉತ್ತಮ ಸಿನಿಮಾ' ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು 'ಪ್ರಭಾಸ್ ರಾಮನಾಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದೆ ಎಂದು ನೆಟಿಜನ್ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಂಗೀತ ಸಿನಿಮಾದ ಹೈಲೈಟ್ ಎಂದು ಓರ್ವರು ತಿಳಿಸಿದ್ದಾರೆ. ಫೈಟಿಂಗ್ ದೃಶ್ಯಗಳು ಆಕರ್ಷಕವಾಗಿವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಸಿನಿಮಾದ ಆರಂಭದಲ್ಲಿ ಅನಿಮೇಷನ್ ದೃಶ್ಯಗಳು ಚೆನ್ನಾಗಿವೆ. ಕಥೆಯನ್ನು ವಿವರಿಸಿರುವ ರೀತಿ ಕೂಡ ಅದ್ಭುತವಾಗಿದೆ. ಹಾಡುಗಳು ಮತ್ತು ಬಿಜಿಎಂ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ಹೆಚ್ಚಿನ ಸಂಖ್ಯೆಯ ನೆಟಿಜನ್ಗಳು. ಪ್ರಭಾಸ್ ಮತ್ತು ಕೃತಿ ಸನೋನ್ ನಟನೆ ಸಿನಿಮಾದ ಜೀವಾಳ ಎಂಬುದು ಕೆಲವರ ಅಭಿಪ್ರಾಯ.