ಹೈದರಾಬಾದ್: ಪ್ರಭಾಸ್, ಕೃತಿ ಸನೋನ್, ಸೈಫ್ ಆಲಿ ಖಾನ್ ನಟನೆಯ 'ಆದಿಪುರುಷ್' ಸಿನಿಮಾ ಈಗಾಗಲೇ ಜನರಲ್ಲಿ ಕುತೂಹಲದ ಜೊತೆಗೆ ಕ್ರೇಜ್ ಮೂಡಿಸಿದೆ. ಮಹಾಕಾವ್ಯ ರಾಮಾಯಣದ ಕಥೆಯನ್ನು ಆಧುನಿಕ ತಂತ್ರಜ್ಞಾನದಲ್ಲಿ ವೀಕ್ಷಣೆ ಮಾಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಆಗ್ಗಿಂದಾಗೆ ಸಿನಿಮಾಗೆ ಸಂಬಂಧಿಸಿದ ಹೊಸ ಅಪ್ಡೇಟ್ಗಳನ್ನು ನಟ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ನೀಡುತ್ತಿರುತ್ತಾರೆ. ಅದರ ಅನುಸಾರವಾಗಿ ಇಂದು ಅವರು 'ಆದಿಪುರುಷ್' ಸಿನಿಮಾದ ಜೈ ಶ್ರೀ ರಾಮ್ ಹಾಡಿನ ಸಾಹಿತ್ಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಹಾಡಿನ ಸಾಲಿಗೆ ಜನರು ಮನಸೋತಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಜೈ ಶ್ರೀ ರಾಮ್' ಸಾಹಿತ್ಯದ ಮೋಷನ್ ಪೋಸ್ಟರ್ ಅನ್ನು ಪಂಚ ಭಾಷೆಗಳಲ್ಲಿ ಅಂದರೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಳಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಕುರಿತು ತಿಳಿಸಿರುವ ಅವರು, ಚಾರ್ಧಾಮ್ ಪ್ರವಾಸಕ್ಕೆ ಹೋಗಲು ಅಸಾಧ್ಯವಾಗದವರು ಪ್ರಭು ಶ್ರೀ ರಾಮನ ನಾಮ ಸ್ಮರಣೆ ಮಾಡಬಹುದು ಎಂದಿದ್ದಾರೆ.
ನಟ ಪ್ರಭಾಸ್ ಅವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಕಮೆಂಟ್ಗಳ ಸುರಿಮಳೆ ಸುರಿಸಿದ್ದಾರೆ. ಜೈ ಶ್ರೀ ರಾಂ ಸಾಹಿತ್ಯ ಕೇಳುತ್ತಿದ್ದಂತೆ ಅಭಿಮಾನಿಗಳು ಪುಳಕಿತರಾಗಿದ್ದು, ಇದರ ವಿಡಿಯೋಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ, 'ಆದಿಪುರುಷ್' ನ್ಯೂಯಾರ್ಕ್ನಲ್ಲಿ ಪ್ರತಿಷ್ಠಿತ ಟ್ರಿಬೆಕಾ ಫೆಸ್ಟಿವಲ್ನಲ್ಲಿ ಜೂನ್ 13ರಂದು ಪ್ರದರ್ಶನ ಕಾಣಲಿದೆ. ಈ ಕುರಿತು ನಟ ಪ್ರಭಾಸ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಚಿತ್ರ ಜನವರಿ 16ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ. 3ಡಿಯಲ್ಲಿ ಈ ಚಿತ್ರ ತೆರೆಕಾಣಲಿದೆ.