'ಆದಿಪುರುಷ್' ಸಿನಿಮಾಗೆ ದೇಶ- ವಿದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶವಾಸಿಗಳು ಮಾತ್ರವಲ್ಲದೇ ನೆರೆ ದೇಶ ನೇಪಾಳದಲ್ಲೂ ಚಿತ್ರದ ವಿಚಾರವಾಗಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಾರಣ ಚಿತ್ರದ ಒಂದು ಡೈಲಾಗ್. ಸೀತೆಯನ್ನು ಭಾರತದ ಮಗಳು ಎಂದು ಕರೆದಿದ್ದು ನೇಪಾಳಿಗರನ್ನು ಕೆರಳಿಸಿದೆ.
ಡೈಲಾಗ್ ಸರಿಪಡಿಸುವವರೆಗೂ ಸಿನಿಮಾ ಪ್ರದರ್ಶನಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸೀತೆಯನ್ನು ಭಾರತದ ಮಗಳು ಎಂದು ಕರೆದಿರುವುದು ನಮಗೆ ಹೆಚ್ಚು ನೋವುಂಟು ಮಾಡಿದೆ ಎಂದು ನೇಪಾಳ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಆದಿಪುರುಷ್ ನಿರ್ಮಾಪಕರು ನೇಪಾಳ ಸರ್ಕಾರಕ್ಕೆ ಲಿಖಿತ ಕ್ಷಮೆ ಯಾಚಿಸಿದ್ದಾರೆ. ಕ್ಷಮಾಪಣೆ ಪತ್ರವನ್ನು ಕಳುಹಿಸಿದ್ದಾರೆ.
ಆದಿಪುರುಷ್ ಕ್ಷಮಾಪಣಾ ಪತ್ರ: 'ನಮ್ಮಿಂದ ನೇಪಾಳ ಜನರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ನಾವು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ನಾವು ಭಾರತೀಯರಾಗಿ ನಮಗೆ, ಪ್ರತಿ ದೇಶದ ಮಹಿಳೆಯರ ಗೌರವ ವಿಷಯ ಮೊದಲನೆಯದು. ನೀವು ಚಿತ್ರವನ್ನು ಕಾಲ್ಪನಿಕವಾಗಿ ವೀಕ್ಷಿಸಬೇಕೆಂದು ನಾವು ಬಯಸುತ್ತೇವೆ. ಜೊತೆಗೆ, ನಮ್ಮ ಇತಿಹಾಸದಲ್ಲಿ ಆಸಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಸಿನಿಮಾ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕರಿಸುವಂತೆ ವಿನಂತಿಸುತ್ತೇವೆ' ಎಂದು ಬರೆಯಲಾಗಿದೆ.
ಬಿಹಾರದ ಸೀತಾಮರ್ಹಿ ಜಿಲ್ಲೆಯನ್ನು ಸೀತೆಯ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ನೇಪಾಳ ಸರ್ಕಾರವು ಸೀತಾಮಾತೆ ನೇಪಾಳದ ಜನಕ್‌ಪುರದಲ್ಲಿ ಜನಿಸಿದ ದೇವಿ ಎಂದು ಹೇಳಿಕೊಂಡಿದೆ. ಆದಿಪುರುಷ್ ಚಿತ್ರದ ಸಂಭಾಷಣೆಯಲ್ಲಿ ಸೀತಾ ಭಾರತದ ಮಗಳು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನೇಪಾಳ, ಆದಿಪುರುಷ್ ಸೇರಿ ಬಾಲಿವುಡ್ ಸಿನಿಮಾ ಪ್ರದರ್ಶನಗಳನ್ನು ಸದ್ಯ ನಿಷೇಧಿಸಿದೆ.
ಸಿನಿಮಾ ನಿಷೇಧಿಸುವಂತೆ ಮೋದಿಗೆ ಪತ್ರ:ಚಿತ್ರವನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸಿನಿಮಾ ನಿಷೇಧಿಸುವಂತೆ ಒತ್ತಾಯಿಸಿದೆ. ಅಲ್ಲದೇ ಚಿತ್ರದ ನಿರ್ದೇಶಕ ಓಂ ರಾವುತ್ ಮತ್ತು ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸುವ ಕುರಿತು ಸಂಘ ಮಾತನಾಡಿದೆ.