'ಆದಿಪುರುಷ್' ಸಿನಿಮಾದ ಡೈಲಾಗ್ಗಳು ಅದರಲ್ಲೂ ಆಂಜನೇಯನ ಸಂಭಾಷಣೆಗಳ ಬಗ್ಗೆ ಭಾರಿ ಚರ್ಚೆ ನಡೆದಿದ್ದು ನಿಮಗೆ ಗೊತ್ತೇ ಇದೆ. ಸಿನಿಮಾ ಡೈಲಾಗ್ ಸಂಬಂಧ ಹೆಚ್ಚಿನ ಟೀಕೆಗಳು ಕೇಳಿ ಬಂದಿದ್ದವು. ಇದೀಗ ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಡೈಲಾಗ್‌ಗಳಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್: '' 'ಆದಿಪುರುಷ್' ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕೈಮುಗಿದು, ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಧರ್ಮ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ'' ಎಂದು ಡೈಲಾಗ್ ರೈಟರ್ ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಕ್ಷಮೆಯಾಚನೆ ಬಹಳ ತಡವಾಯಿತೆಂದು ಹಲವರು ತಿಳಿಸಿದ್ದರೆ, ಕೆಲವರು ಕ್ಷಮೆಯಾಚನೆ ಟ್ವೀಟ್ ಅನ್ನು ಸ್ವೀಕರಿಸಿದ್ದಾರೆ. ತಡವಾಯಿತೆಂದು ಹೇಳಿದವರು ಆದಿಪುರುಷ್ ಡೈಲಾಗ್ ರೈಟರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
ಹನುಮಂತನ ಡೈಲಾಗ್ಗೆ ವಿರೋಧ: ಮೊದಲು ಬಿಡುಗಡೆ ಆದ ಆದಿಪುರುಷ್ ಚಿತ್ರದ ಕೆಲ ಡೈಲಾಗ್ಗಳಿಗೆ ಪ್ರೇಕ್ಷಕರು ಕಿಡಿ ಕಾರಿದ್ದರು. ಲಂಕಾ ದಹನ ದೃಶ್ಯದಲ್ಲಿ ಬರುವ ಹನುಮಂತನ ಸಂಭಾಷಣೆಗಳನ್ನು ಮೆಚ್ಚಿಕೊಂಡಿರಲಿಲ್ಲ. ನಟ ದೇವದತ್ತ ನಾಗೆ (Devdatta Nage) ಹನುಮಾನ್ ಪಾತ್ರ ವಹಿಸಿದ್ದಾರೆ, ಲಂಕಾ ದಹನ ದೃಶ್ಯದಲ್ಲಿ ಅವರ ಬಾಯಿಂದ ಬಂಡ ಡೈಲಾಗ್ಗಳು ಟೀಕೆಗಳನ್ನು ಆಹ್ವಾನಿಸಿತ್ತು. ದೇವರ ಬಾಯಲ್ಲಿ ಇಂತಹ ಮಾತುಗಳನ್ನಾಡಿಸುವುದು ಸರಿ ಅಲ್ಲ ಎಂದು ಹಲವರು ಕಿಡಿಕಾರಿದ್ದರು.