ಬಿಗ್ ಬಜೆಟ್ ಸಿನಿಮಾ 'ಆದಿಪುರುಷ್' ಜಗತ್ತಿನಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಇಂದಿನಿಂದ ಪ್ರದರ್ಶನ ಆರಂಭಿಸಿದೆ. ಓಂ ರಾವುತ್ ನಿರ್ದೇಶನದ ಚಿತ್ರವು ಮಿಶ್ರ ವಿಮರ್ಶೆ ಸಿಕ್ಕಿದೆ. ಕೆಲವರು ಸಿನಿಮಾವನ್ನು ಶ್ಲಾಘಿಸಿದರೆ, ಮತ್ತಷ್ಟು ಮಂದಿ ಗ್ರಾಫಿಕ್ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಸಿನಿಮಾ ಹಿಂಸಾಚಾರ ಘಟನೆಗೆ ಸಾಕ್ಷಿಯಾಯಿತು. ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪ್ರೇಕ್ಷಕರೊಬ್ಬರು ಹೈದರಾಬಾದ್‌ನ ಚಿತ್ರಮಂದಿರವೊಂದರ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆದಿಪುರುಷ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ, ಅವರ ಸುತ್ತಲೂ ಸೇರಿದ್ದ ಕೆಲವರು ಅವರನ್ನು ಥಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?: ವೈರಲ್ ವಿಡಿಯೋದಲ್ಲಿ ಪ್ರೇಕ್ಷಕ ತೆಲುಗಿನಲ್ಲಿ ಮಾತನಾಡುತ್ತಾ, "ಪ್ಲೇ ಸ್ಟೇಷನ್ ಆಟಗಳಿಂದ ರಾಕ್ಷಸರನ್ನು ತಂದು ಈ ಚಿತ್ರದಲ್ಲಿ ಇರಿಸಿದ್ದಾರೆ. ಹನುಮಾನ್, ಹಿನ್ನೆಲೆ ಸಂಗೀತ, ಕೆಲ 3D ಶಾಟ್‌ಗಳನ್ನು ಹೊರತುಪಡಿಸಿ ಇಲ್ಲಿ ಏನೂ ಇಲ್ಲ" ಎಂದು ದೂರಿದ್ದಾರೆ. ಅಷ್ಟೇ ಅಲ್ಲ, ರಾಘವ್ ಪಾತ್ರದಲ್ಲಿ ಪ್ರಭಾಸ್ ನಟನೆ ಬಗ್ಗೆ ಕೇಳಿದಾಗ, "ಬಾಹುಬಲಿಯಲ್ಲಿ ಅವರು ರಾಜನಂತೆ ಕಾಣಿಸಿಕೊಂಡಿದ್ದರು. ಅಲ್ಲಿ ಎಲ್ಲವೂ ಅದ್ಧೂರಿ ಆಗಿತ್ತು. ಅದನ್ನು ನೋಡಿ ರಾಘವ್ ಪಾತ್ರಕ್ಕೆ ಪ್ರಭಾಸ್ ಅವರನ್ನು ಆಯ್ಕೆ ಮಾಡಿದರು. ಈ ಪಾತ್ರವನ್ನು ಓಂ ರಾವುತ್ ಸರಿಯಾಗಿ ತೋರಿಸಿಲ್ಲ, ರಾಮನ ಪಾತ್ರ ಪ್ರಭಾಸ್ಗೆ ಸೂಟ್ ಆಗುತ್ತಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕೇಳುತ್ತಿದ್ದಂತೆ ಅವರ ಸುತ್ತಲಿದ್ದ ಜನರು ಅವರನ್ನು ಸುತ್ತಿಕೊಂಡರು. ಬಿಗುವಿನ ವಾತಾವರಣ ಉಂಟಾಗುತ್ತಿದ್ದಂತೆ ಅಂತಿಮವಾಗಿ ಅವರನ್ನು ರಕ್ಷಿಸಬೇಕಾಯಿತು.
ಆದಿಪುರುಷ್ ಗ್ರಾಫಿಕ್ಸ್ ಚಿತ್ರದ ಮೊದಲ ಟೀಸರ್ ಬಿಡುಗಡೆ ಆದ ಸಮಯದಿಂದಲೇ ಸಿನಿಮಾ ಟೀಕೆಗೆ ಗುರಿಯಾಗಿದೆ. ಸಿನಿಮಾ ಮೇಲಿನ ಅಭಿಪ್ರಾಯ, ಕುತೂಹಲ ವಿಚಾರವಾಗಿ ಹಿನ್ನೆಡೆ ಉಂಟಾಗಿದ್ದರಿಂದ ಚಿತ್ರದ ನಿರ್ಮಾಪಕರು ಅದರ ಬಿಡುಗಡೆ ದಿನಾಂಕವನ್ನು ವಿಳಂಬಗೊಳಿಸಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಅನೇಕ ಪ್ರತಿಕ್ರಿಯೆಗಳನ್ನು ಆಧರಿಸಿ ಹೇಳುವುದಾದರೆ, ಚಿತ್ರದ VFX ಭಾಗವು ಪರಿಶೀಲನೆಗೆ ಒಳಪಟ್ಟಿದೆ ಎಂದು ತೋರುತ್ತದೆ.
ಪಾತ್ರಗಳು, ನಟರು, ಗ್ರಾಫಿಕ್ಸ್ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ಮುಂದುವರಿದಿದೆ. ಚಿತ್ರವನ್ನು ಬಹಿಷ್ಕರಿಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉದ್ದನೆಯ ಗಡ್ಡ, ಮೊನಚಾದ ಕೂದಲು, ದುಷ್ಟನಾಗಿ ಕಾಣಿಸಿಕೊಂಡಿರುವ ರಾವಣನ ದೃಶ್ಯಗಳಿಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಲೆದರ್ ಬೆಲ್ನಿಂದ ರೆಡಿ ಮಾಡಿದಂತಿರುವ ಉಡುಗೆಯಲ್ಲಿ ಭಗವಾನ್ ಹನುಮಂತನ ದರ್ಶನ ಕಂಡ ಅನೇಕರು ಕಿಡಿ ಕಾರಿದ್ದಾರೆ.