ಪೌರಾಣಿಕ ಸಿನಿಮಾ ಆದಿಪುರುಷ್ ಓಟ ನಿಲ್ಲಿಸುವಂತೆ ತೋರುತ್ತಿದೆ. ಅದ್ಭುತ ಆರಂಭ ಪಡೆದ ಸಿನಿಮಾ ನಾಲ್ಕನೇ ದಿನದಲ್ಲೇ ಕಲೆಕ್ಷನ್ ಕುಸಿತ ಕಾಣಲು ಪ್ರಾರಂಭಿಸಿತು. ಮೊದಲ ದಿನ 140 ಕೋಟಿ ರೂ. ಸಂಪಾದಿಸಿದ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಅಂತಿಮವಾಗಿ ಒಂದಂಕಿಗೆ ಬಂದು ನಿಂತಿದೆ. ಮೂರೇ ದಿನದೊಳಗೆ ಸಿನಿಮಾ ಸಾಕಷ್ಟು ಟೀಕೆಗೆ ಒಳಗಾಗಿದೆ. ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ ಆದಿಪುರುಷ್ ಸಿನಿಮಾ ಗುರುವಾರದಂದು ಭಾರತದಲ್ಲಿ ಎಲ್ಲ ಭಾಷೆಗಳು ಸೇರಿ ಸುಮಾರು 5.5 ಕೋಟಿ ರೂ. ಸಂಪಾದಿಸಿದೆ. ವಿವಾದಕ್ಕೊಳಗಾದ ಸಂಭಾಷಣೆಗಳನ್ನು ಬದಲಾಯಿಸಿದ ನಂತರವೂ ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿ - ಅಂಶಗಳು ಕಡಿಮೆಯಾಗುತ್ತಲೇ ಇವೆ.
ಆದಿಪುರುಷ್ ಒಟ್ಟು ಕಲೆಕ್ಷನ್: Sacnilk.com ಪ್ರಕಾರ, ಸಿನಿಮಾ 7ನೇ ದಿನದಂದು 5.5 ಕೋಟಿ ರೂ. ಗಳಿಸಿತು. ಎಲ್ಲಾ ಭಾಷೆಗಳು ಸೇರಿದಂತೆ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಮೊದಲ ವಾರದ ಒಟ್ಟು ಕಲೆಕ್ಷನ್ 260.55 ಕೋಟಿ ರೂಪಾಯಿ. ವಿಶ್ವಾದ್ಯಂತ ಆರು ದಿನಗಳಲ್ಲಿ ಸಿನಿಮಾ 410 ಕೋಟಿ ರೂ. ಗಳಿಸಿದೆ ಎಂದು ಟಿ-ಸೀರಿಸ್ ಗುರುವಾರ ಪ್ರಕಟಿಸಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ದಿನೇ ದಿನೆ ಕುಸಿತ ಕಾಣುತ್ತಿದೆ. ಸುಮಾರು 500-600 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಆದಿಪುರುಷ್ ಕೇವಲ ಮೂರು ದಿನಗಳಲ್ಲಿ 340 ಕೋಟಿ ರೂ. ಗಳಿಸಿತು. ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂ. ಸಂಪಾದಿಸಿತು. ನಂತರದ ಎರಡು ದಿನ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತಲಾ 100 ಕೋಟಿ ರೂ. ಸಂಪಾದಿಸಿತು. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ಕಲೆಕ್ಷನ್ನಲ್ಲಿ ಭಾರಿ ಕುಸಿತ ಆಯಿತು.