ಶುಕ್ರವಾರ ಅದ್ಧೂರಿಯಾಗಿ ತೆರೆಕಂಡಿರುವ ಆದಿಪುರುಷ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದರೂ, ಹೌಸ್ ಫುಲ್ ಶೋ ನಡೆಯುತ್ತಿದೆ. ಡೈಲಾಗ್‌ಗಳು ಮತ್ತು ಗ್ರಾಫಿಕ್ಸ್ ವಿಚಾರವಾಗಿ ಸಾಕಷ್ಟು ವಿವಾದಗಳನ್ನು ಎದುರಿಸುತ್ತಿರುವುದರ ಹೊರತಾಗಿಯೂ, ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಕಲೆಕ್ಷನ್ ಸುಮಾರು 86 ಕೋಟಿ ರೂ. ಎರಡನೇ ದಿನ ಚಿತ್ರದ ಗಳಿಕೆ 65 ಕೋಟಿ ರೂ. ಈ ಮೂಲಕ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಗಳಿಕೆ 151 ಕೋಟಿ ರೂ.ಗೆ ಏರಿದೆ. ಎರಡನೇ ದಿನದ ಸಾಗರೋತ್ತರ ಪ್ರದೇಶಗಳ ಅಂಕಿಅಂಶ ನಿರೀಕ್ಷಿಸಲಾಗಿದೆ.
ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬೆಡಗಿ ಕೃತಿ ಸನೋನ್ ಮುಖ್ಯಭೂಮಿಕೆಯ 'ಆದಿಪುರುಷ್' ಬಾಕ್ಸ್ ಆಫೀಸ್ ಸಂಖ್ಯೆ ಎಲ್ಲರ ಹುಬ್ಬೇರಿಸಿದೆ. ದಿಗ್ಭ್ರಮೆಗೊಳಿಸುವಂತ ಸಂಖ್ಯೆಯನ್ನು ದಾಖಲಿಸಿದೆ. ಈ ಕ್ರೇಜ್ 2ನೇ ದಿನವೂ ಮುಂದುವರೆದಿದೆ. ತೀವ್ರ ಟೀಕೆಗಳ ಹೊರತಾಗಿಯೂ, ಚಿತ್ರವು ಶನಿವಾರ ಉತ್ತಮ ಕಲೆಕ್ಷನ್ ಮಾಡಿದೆ. ಓಂ ರಾವುತ್ ನಿರ್ದೇಶನದ ಪೌರಾಣಿಕ ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ 200 ಕೋಟಿ ರೂ ಕ್ಲಬ್ ಪ್ರವೇಶಿಸಿಸುವಲ್ಲಿ ಯಶಸ್ವಿ ಆಗಿದೆ.
ಸಿನಿಮಾ ತೆರೆಕಂಡ 2ನೇ ದಿನದಂದು ಎಲ್ಲ ಭಾಷೆಗಳೂ ಸೇರಿ ಭಾರತವೊಂದರಲ್ಲೇ 65 ಕೋಟಿ ರೂಪಾಯಿ ಸಂಪಾದಿಸಿದೆ ಎಂದು ಸಿನಿಮಾ ವ್ಯವಹಾರ ತಜ್ಞ ಸ್ಯಾಕ್ನಿಲ್ಕ್ (Sacnilk) ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ದಿನ 86.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಪ್ರಭಾಸ್ ಅವರ ಸ್ಟಾರ್ಡಂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಖತ್ ವರ್ಕ್ ಆಗಿದೆ. ತೆಲುಗು ಮಾತನಾಡುವ ಈ ಎರಡೂ ರಾಜ್ಯಗಳಲ್ಲಿ ಎರಡನೇ ದಿನದ ಒಟ್ಟು ಕಲೆಕ್ಷನ್ 26 ಕೋಟಿ ರೂ. ಆಗಿದೆ.