ಪ್ರಭಾಸ್, ಕೃತಿ ಸನೋನ್ ಮುಖ್ಯಭೂಮಿಕೆಯ ಆದಿಪುರುಷ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಚೇತರಿಕೆಯ ಲಕ್ಷಣ ಕಾಣತ್ತಿಲ್ಲ. ಕಳಪೆ ವಿಮರ್ಶೆಗಳು ಮತ್ತು ಋಣಾತ್ಮಕ ಬಾಯಿಮಾತುಗಳು ಕಾಳ್ಗಿಚ್ಚಿನಂತೆ ಹಬ್ಬಿ ಚಿತ್ರದ ಸೋಲಿಗೆ ಕಾರಣವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕುಸಿತದ ಪ್ರವೃತ್ತಿ ಮುಂದುವರಿದಿದೆ. ಸೋಮವಾರದಂದು, ದೇಶೀಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಕಲೆಕ್ಷನ್ ಮಾಡಿದೆ. ಇದುವರೆಗಿನ ಅತಿ ಕಡಿಮೆ ಕಲೆಕ್ಷನ್ ಸಂಖ್ಯೆ ಇದಾಗಿದೆ.
ನೆಗೆಟಿವ್ ವಿಮರ್ಷೆ: ಚಿತ್ರದ ಟೀಸರ್ ಬಿಡುಗಡೆ ಆಗೋವರೆಗೂ 'ಆದಿಪುರುಷ್' ಹಿಂದಿ ಚಿತ್ರರಂಗಕ್ಕೆ ಗೇಮ್ ಚೇಂಜರ್ ಚಲನಚಿತ್ರ ಎಂದು ಗ್ರಹಿಸಲಾಗಿತ್ತು. ಆದ್ರೆ ಟೀಸರ್ ಕಳಪೆಯಾಗಿದೆ ಎಂಬ ಪ್ರತಿಕ್ರಿಯೆಯನ್ನು ಗಳಿಸಿತು. ಬಳಿಕ ಟ್ರೇಲರ್ ಕೂಡ ಟೀಕೆಗೊಳಗಾಯಿತು. ಪುರಾತನ ಸಂಸ್ಕೃತ ಮಹಾಕಾವ್ಯ 'ರಾಮಾಯಣ'ದ ರೂಪಾಂತರವಾದ ಚಲನಚಿತ್ರವು ಗ್ರಾಫಿಕ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಯಿತು. ಶ್ರೀರಾಮನ ಯುಗವನ್ನು ತಪ್ಪಾಗಿ ಚಿತ್ರಿಸಿರುವುದಾಗಿ ಮತ್ತು ದೇವರ ಬಾಯಿಂದ ಆಡುಮಾತಿನ ಭಾಷೆಯಲ್ಲಿ ಮಾತನಾಡಿಸಿರುವುದಕ್ಕಾಗಿ ಪ್ರೇಕ್ಷಕರ ಟೀಕೆ ಎದುರಿಸಿತು. ಇದು ಸಿನಿಮಾ ಕಲೆಕ್ಷನ್ ಸಂಖ್ಯೆ ಮೇಲೆ ಪರಿಣಾಮ ಬೀರಿತು.
11 ದಿನಗಳಲ್ಲಿ ಮೊದಲ ಬಾರಿ ಅತಿ ಕಡಿಮೆ ಸಂಗ್ರಹ:ಮೊದಲ ವಾರಾಂತ್ಯದಲ್ಲಿ ಚಿತ್ರವು ಯಶಸ್ವಿ ಆರಂಭಿಕ ದಿನಗಳನ್ನು ಹೊಂದುವಲ್ಲಿ ಯಶಸ್ವಿಯಾಯಿತು. ಮೂರು ದಿನಗಳಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಕಲೆಕ್ಷನ್ ಮಾಡಿತು. ಆದರೆ ನಾಲ್ಕನೇ ದಿನದ ಕಲೆಕ್ಷನ್ ಸಿನಿಮಾ ಸೋಲಿನ ಸೂಚನೆ ನೀಡಿತು. ಒಂದಂಕಿಯ ಕಲೆಕ್ಷನ್ 11ನೇ ದಿನವೂ ಮುಂದುವರೆಯಿತು.
1.75 ಕೋಟಿ ರೂ. ಸಂಪಾದನೆ: Sacnilk ಪ್ರಕಾರ, ಆದಿಪುರುಷ್ ಸಿನಿಮಾ 11ನೇ ದಿನ (ಸೋಮವಾರ) ದೇಶೀಯ ಮಾರುಕಟ್ಟೆಯಲ್ಲಿ ಎಲ್ಲ ಭಾಷೆಗಳನ್ನು ಒಳಗೊಂಡಂತೆ 1.75 ಕೋಟಿ ರೂ. ಸಂಪಾದಿಸಿದೆ. ಭಾರತದಲ್ಲಿ ಈವರೆಗೆ ಒಟ್ಟು 277.50 ಕೋಟಿ ರೂ. ಗಳಿಸಿದೆ.