ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಲ್ಕು ದಿನಗಳಲ್ಲಿ ಚಿತ್ರ ಥಿಯೇಟರ್‌ಗೆ ಬರಲಿದೆ. ಆದರೆ, ಆದಿಪುರುಷ್ ಬಿಡುಗಡೆಗೂ ಮುನ್ನವೇ ಮುಗಂಡ ಟಿಕೆಟ್ ಮಾರಾಟದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಆನ್‌ಲೈನ್ ಮುಂಗಡ ಟಿಕೆಟ್ ಮಾರಾಟವು ಈಗಾಗಲೇ ಆರ್ಆರ್ಆರ್ ಮತ್ತು ಕೆಜಿಎಫ್ ಅನ್ನು ಮೀರಿಸಿದೆ. ಜೊತೆಗೆ ಶಾರುಖ್ ನಟನೆಯ ಬ್ಲಾಕ್ ಬಸ್ಟರ್ ಹಿಂದಿ ಚಲನಚಿತ್ರ 'ಪಠಾಣ್' ದಾಖಲೆಯನ್ನು ಕೂಡ ಹಿಂದಿಕ್ಕಿದೆ.
ಹೈಸ್ಪೀಡ್ನಲ್ಲಿ ಟಿಕೆಟ್ ಮಾರಾಟ: ದೇಶದೆಲ್ಲೆಡೆ ಆದಿಪುರುಷ್ ಚಿತ್ರದ ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಆದರೆ ಮುಂಗಡ ಬುಕ್ಕಿಂಗ್ ಆರಂಭವಾಗಿ 24 ಗಂಟೆಗಳು ಕಳೆಯುವ ಮುನ್ನವೇ ಚಿತ್ರ ಹಲವು ದಾಖಲೆಗಳನ್ನು ಮುರಿದಿದೆ. ಮೂಲಗಳ ಪ್ರಕಾರ, ಚಿತ್ರದ ಹಿಂದಿ ಆವೃತ್ತಿಯು ಮುಂಗಡ ಬುಕಿಂಗ್‌ನಲ್ಲಿ 1.40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಮೊದಲ ದಿನವೇ 36 ಸಾವಿರ ಟಿಕೆಟ್ ಮಾರಾಟವಾಗಿದೆ. ಒಂದೇ ದಿನ ಚಿತ್ರವು ದೇಶದಾದ್ಯಂತ (ಎಲ್ಲ ಭಾಷೆಗಳನ್ನು ಒಳಗೊಂಡಂತೆ) 1.62 ಕೋಟಿ ರೂಪಾಯಿಗಳ ಟಿಕೆಟ್‌ಗಳ ಮಾರಾಟವನ್ನು ಕಂಡಿದೆ.
ಆದಿಪುರುಷ್ ಹನುಮಾನ್ಗೆ ಸೀಟು ಮೀಸಲು: ಟಿಕೆಟ್ ಮಾರಾಟದಲ್ಲಿ ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಮಾಯಣ ಪಾರಾಯಣ ನಡೆಯುವ ಸ್ಥಳಕ್ಕೆ ಹನುಮಂತ ದೇವರು ಬರುತ್ತಾನೆ ಎಂಬ ನಂಬಿಕೆಯನ್ನು ಗೌರವಿಸಿ, ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತ ದೇವರಿಗೆ ಆಸನವನ್ನು ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ.