'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ಅವರು ಬಾಲಿವುಡ್ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈನಲ್ಲಿರುವ ಫ್ಲಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಜುಲೈ 14ರಂದು ಸುಶಾಂತ್ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಇದೇ ಮನೆಯನ್ನು ಅದಾ ಅವರು ಶೀಘ್ರದಲ್ಲೇ ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದೆ. ಪಾಪರಾಜಿಗಳು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀವು ಸುಶಾಂತ್ ಅವರ ಮನೆಯನ್ನು ಖರೀದಿಸಿದ್ದೀರಾ? ಎಂಬ ಪಾಪ್ಗಳ ಪ್ರಶ್ನೆಗೆ ಯಾವುದೇ ಅಧಿಕೃತ ಉತ್ತರವನ್ನು ನೀಡದೇ ಅದಾ ಶರ್ಮಾ ತೆರಳುತ್ತಿರುವ ವಿಡಿಯೋ ಇದಾಗಿದೆ. "ಹಾಗೇನಾದರೂ ಇದ್ದರೆ ಮೊದಲು ನಾನು ನಿಮಗೆ ಹೇಳುತ್ತೇನೆ. ಎಲ್ಲವೂ ಸರಿಯಾಗಿ ನಡೆದರೇ ಆದಷ್ಟು ಬೇಗ ನಿಮ್ಮ ಬಾಯಿಯನ್ನು ಸಿಹಿಗೊಳಿಸುತ್ತೇನೆ" ಎಂದು ಅವರು ಉತ್ತರಿಸಿದ್ದಾರೆ.
ಬಾಲಿವುಡ್ನ ಭರವಸೆ ನಟನಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂರ್ 2020ರ ಜುಲೈ 14 ರಂದು ನಿಧನರಾದರು. ನಟನ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬಾಲಿವುಡ್ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿತ್ತು.
ಸುಶಾಂತ್ ನಿಧನದ ನಂತರ ಅವರ ಮನೆ ಖಾಲಿಯಾಗಿಯೇ ಉಳಿದುಕೊಂಡಿದೆ. ಈ ಮನೆಯಲ್ಲಿ ಅವರು ವಾಸಿಸುತ್ತಿದ್ದ ಸಮಯದಲ್ಲಿ 4.50 ಲಕ್ಷ ರೂಪಾಯಿ ಬಾಡಿಗೆಯನ್ನು ಕೊಡುತ್ತಿದ್ದರು ಎನ್ನಲಾಗಿದೆ. ಇದೀಗ 3 ವರ್ಷಗಳ ನಂತರ ಈ ಮನೆಯನ್ನು ಅದಾ ಶರ್ಮಾ ಖರೀದಿಸಿರುವ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ 'ದಿ ಕೇರಳ ಸ್ಟೋರಿ' ನಟಿ ಖಚಿತಪಡಿಸಲಿದ್ದಾರೆ ಎನ್ನುವ ನಿರೀಕ್ಷೆಯಿದೆ.
ಇದನ್ನೂ ಓದಿ:ಸುಶಾಂತ್ ಸಿಂಗ್ ಸಾವಿನ ವಿವಾದದ ಬಳಿಕ ರೋಡೀಸ್ ರಿಯಾಲಿಟಿ ಶೋದಲ್ಲಿ ರಿಯಾ ಚಕ್ರವರ್ತಿ