ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸ್ಯಾಂಡಲ್ವುಡ್ನ ಹೈ ವೊಲ್ಟೇಜ್ ಚಿತ್ರ 'ಕಬ್ಜ'. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹವಾ ಸೃಷ್ಟಿಸಿರೋ ಕಬ್ಜ ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ, ಆರ್ ಚಂದ್ರು ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ. ದಿ. ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ ಮಾರ್ಚ್ 17ರಂದು ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಈಗಾಗಲೇ ಟೀಸರ್ನಿಂದಲೇ ದಾಖಲೆ ಬರೆದಿರೋ ಕಬ್ಜ ಚಿತ್ರ ಕೆಲ ದಿನಗಳ ಹಿಂದೆ ಕಬ್ಜ ಕಬ್ಜ ಎಂಬ ಟೈಟಲ್ ಹಾಡನ್ನು ಬಿಡುಗಡೆ ಮಾಡಿತ್ತು. ರೆಟ್ರೋ ಅವತಾರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಿನಿಪ್ರಿಯರಿಗೆ ದರ್ಶನ ಕೊಟ್ಟಿದ್ದರು. ಈ ಬುದ್ಧಿವಂತ ನಟನ ನಯಾ ಅವತಾರಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಮಧ್ಯೆ ಕಬ್ಜ ಚಿತ್ರ ತಂಡದಿಂದ ಹೊಸ ವಿಷಯವೊಂದು ರಿವೀಲ್ ಆಗಿದೆ.
ಕಬ್ಜ ಸಿನಿಮಾದಲ್ಲಿ ತಾನ್ಯಾ ಡ್ಯಾನ್ಸ್:ಹೌದು, ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಶೂಟ್ ಮಾಡಬೇಕು ಎಂದು ಹೇಳಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಈ ಸ್ಪೆಷಲ್ ಸಾಂಗ್ನಲ್ಲಿ ಸೊಂಟ ಬಳುಕಿಸಲು ಪರಭಾಷೆಯ ಫೇಮಸ್ ನಟಿಯೊಬ್ಬರು ಬರಲಿದ್ದಾರೆ ಎಂದು ಹೇಳಿದ್ದರು. ಆದರೆ, ಆ ನಟಿ ಯಾರೆಂದು ನಿರ್ದೇಶಕ ಚಂದ್ರು ಸುಳಿವು ನೀಡಿರಲಿಲ್ಲ. ಫೈನಲಿ ಕಬ್ಜ ಚಿತ್ರದ ವಿಶೇಷ ಹಾಡಿನಲ್ಲಿ ಅಮರ್ ಚಿತ್ರದ ಬೆಡಗಿ ಹಾಗೂ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ (Tanya Hope) ಸೊಂಟ ಬಳುಕಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ವಾರದಲ್ಲಿ ಡೈರೆಕ್ಟರ್ ಚಂದ್ರು ಈ ಸ್ಪೆಷಲ್ ಹಾಡನ್ನು ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ರೆಟ್ರೋ ಬ್ಯಾಕ್ ಟ್ರಾಪ್ ಸೆಟ್ ಹಾಕಿ ನೂರಾರು ಡ್ಯಾನ್ಸರ್ ಮಧ್ಯೆ ಈ ಹಾಡನ್ನು ಚಿತ್ರೀಕರಣ ಮಾಡಲು ನಿರ್ದೇಶಕ ಆರ್ ಚಂದ್ರು ಪ್ಲ್ಯಾನ್ ಮಾಡಿದ್ದಾರೆ. ಈ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.