ಮುಂಬೈ (ಮಹಾರಾಷ್ಟ್ರ): ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ರಹಸ್ಯವಾಗಿ ಮದುವೆಯಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈ ಸುದ್ದಿಯನ್ನು ನವಜೋಡಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದಾರೆ.
34 ವರ್ಷದ ನಟಿ ಸ್ವರಾ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ತಮ್ಮ ದಾಂಪತ್ಯದ ಕಾಲಿಟ್ಟ ಕ್ಷಣಗಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಜನವರಿ 6ರಂದು ನ್ಯಾಯಾಲಯದಲ್ಲಿ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಕೂಡ ಹಿಂದೆ ಪ್ರತಿಭಟನೆಯೊಂದರಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ಮೊದಲ ನೋಟದಲ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತಂತೆ.
ಮದುವೆ ಬಗ್ಗೆ ಸ್ವರಾ ಟ್ವೀಟ್: ಫಹಾದ್ ಅಹ್ಮದ್ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟ ಬಗ್ಗೆ ನಟಿ ಸ್ವರಾ ಸ್ವತಃ ಟ್ವೀಟ್ ಮಾಡಿ, ತಾವಿಬ್ಬರೂ ಭೇಟಿಯಾದ ಕ್ಷಣದಿಂದ ಹಿಡಿದುಕೊಂಡು ಮದುವೆಯವರೆಗಿನ ಕ್ಷಣಗಳ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ, ''ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ'' ಎಂದು ಬರೆದುಕೊಂಡಿದ್ದಾರೆ.