ತಾಯಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಬಾಲಿವುಡ್ ಹಿರಿಯ ನಟಿ ಸುಲೋಚನಾ ಲಾತ್ಕರ್ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಮುಂಬೈನ ಸುಶ್ರುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾದ ಕಾರಣ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಆದರೆ ವಯೋಸಹಜತೆಯಿಂದಾಗಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪ್ರಾರ್ಥಿವ ಶರೀರವನ್ನು ಪ್ರಭಾದೇವಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಯಿತು. ನಂತರ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಟಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಟಿಯ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ: "ಸಲೋಚನಾ ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಅವಿಸ್ಮರಣೀಯ ಪಾತ್ರಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಮುಂದಿನ ಪೀಳಿಗೆಯು ಅವರನ್ನು ಪ್ರೀತಿಸುವಂತೆ ಮಾಡಿದೆ. ಅವರ ಸಿನಿಮಾ ಪರಂಪರೆ ಅವರ ಪಾತ್ರಗಳ ಮೂಲಕ ಉಳಿಯುತ್ತದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಸುಲೋಚನಾ ಲಾತ್ಕರ್ ಸಿನಿಸಾಧನೆ:ಜುಲೈ 30, 1928 ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕ್ಲಟ್ ಗ್ರಾಮದಲ್ಲಿ ಜನಿಸಿದ ಸುಲೋಚನಾ ಲಾತ್ಕರ್ 1946 ರಲ್ಲಿ ತಮ್ಮ ನಟನೆಗೆ ಪದಾರ್ಪಣೆ ಮಾಡಿದರು. ಬಳಿಕ 'ಸಾಸುರ್ವಾಸ್', 'ವಾಹಿನಿಚ್ಯಾ ಬಾಂಗ್ಡ್ಯಾ', 'ಮೀತ್ ಭಾಕರ್', 'ಸಂಗತ್ಯೇ ಐಕಾ', 'ಲಕ್ಷ್ಮೀ ಅಲಿ ಘರಾ', 'ಮೋತಿ ಮಾನ್ಸೆ', 'ಜೀವಚಾ ಸಖಾ', 'ಪತಿವ್ರತಾ', 'ಸುಖಾಚೆ ಸೋಬ್ತಿ', 'ಭೌಭೀಜ್', 'ಆಕಾಶಗಂಗಾ' ಮತ್ತು 'ಧಕ್ತಿ ಜೌ' ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಮರಾಠಿ ಚಲನಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಅವರು ಸುನಿಲ್ ದತ್ರಂತಹ ಬಾಲಿವುಡ್ ತಾರೆಯರೊಂದಿಗೆ 'ಹೀರಾ', 'ಜೂಲಾ', 'ಏಕ್ ಫೂಲ್ ಚಾರ್ ಕಾಂತೆ', 'ಸುಜಾತಾ', 'ಚಿರಾಗ್', 'ರೇಷ್ಮಾ ಔರ್ ಶೇರಾ', ಇತರ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಹೊರತಾಗಿ, ಅವರು ದೇವ್ ಆನಂದ್ ಅವರೊಂದಿಗೆ 'ಜಬ್ ಪ್ಯಾರ್ ಕಿಸೀಸೆ ಹೋತಾ ಹೈ', 'ಪ್ಯಾರ್ ಮೊಹಬ್ಬತ್', 'ದುನಿಯಾ' ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. 1969 ರಿಂದ ರಾಜೇಶ್ ಖನ್ನಾ ಅವರೊಂದಿಗೆ 'ದಿಲ್ ದೌಲತ್ ದುನಿಯಾ', 'ಬಹರಾನ್ ಕೆ ಸಪ್ನೆ', 'ಡೋಲಿ' ಮತ್ತು ಇತರ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅವರ ಸಿನಿಮಾಗಳು ಬಹುಬೇಗನೆ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದವು. ಚಿತ್ರದ ನಾಯಕಿಯಾಗಿ ನಟಿಸಲು ಪ್ರಾರಂಭಿಸಿ, ನಂತರದಲ್ಲಿ ತಾಯಿಯ ಪಾತ್ರವನ್ನು ಕೈಗೆತ್ತಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ನಟಿಸಿ ಸೈ ಎನಿಸಿಕೊಂಡರು. ಇವರ ಉತ್ತಮ ನಟನೆಗಾಗಿ ಹಲವು ಪ್ರಶಸ್ತಿಗಳು ಸಂದಿವೆ. ಲಾತ್ಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು 1999 ರಲ್ಲಿ ನೀಡಲಾಯಿತು. 2004 ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. 2009 ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು.
ಇದನ್ನೂ ಓದಿ:ಹಿರಿಯ ರಂಗಭೂಮಿ ಕಲಾವಿದ ಅಮೀರ್ ರಾಜಾ ಹುಸೇನ್ ಇನ್ನಿಲ್ಲ