ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ನಾಯಕ ನಟನಾಗಿ ಗುರುತಿಸಿಕೊಂಡಿರುವ ನಟ ಕೋಮಲ್ ಲಾಂಗ್ ಬ್ರೇಕ್ ಬಳಿಕ ಮತ್ತೆ ಸಿನಿಮಾಗಳನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಗೋವಿಂದಾಯ ನಮಃ, ವಾರೇ ವ್ಹಾ, ನಮೋ ಭೂತಾತ್ಮ ಹೀಗೆ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಅಂಗಳದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡ ಕೋಮಲ್ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿದ್ದಾರೆ. ಸದ್ಯ 'ರೋಲೆಕ್ಸ್' ಆಗಿರೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಕೆಲ ದಿನಗಳ ಹಿಂದೆ ಅದ್ಧೂರಿ ಕಲರ್ಫುಲ್ ಫೋಟೋಶೂಟ್ ಮಾಡಿಸಿರೋ ಕೋಮಲ್ ಅವರ ರೋಲೆಕ್ಸ್ ಸಿನಿಮಾಗೆ ನಾಯಕಿ ಯಾರು ಅನ್ನೋದು ಫೈನಲ್ ಆಗಿದೆ.
ರೋಲೆಕ್ಸ್ ಸಿನಿಮಾಗೆ ಸೋನಲ್ ಮೊಂತೆರೋ ನಾಯಕಿ: ಕೋಮಲ್ ಅವರ ರೋಲೆಕ್ಸ್ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕರಾವಳಿ ಬೆಡಗಿ ಸೋನಲ್ ಮೊಂತೆರೋ ಜೊತೆಯಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿರೋ ಸೋನಲ್ ಅವರು ನಟ ಕೋಮಲ್ ಅವರೊಂದಿಗೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್ ಅಂಗಳದಲ್ಲಿ ಸಖತ್ ಬ್ಯುಸಿಯಾಗಿರೋ ಸೋನಲ್ ಮೊಂತೆರೋ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ 'ರೋಲೆಕ್ಸ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.
ನಾಳೆ ಸಿನಿಮಾ ಮುಹೂರ್ತ, ನಾಡಿದ್ದು ಶೂಟಿಂಗ್ ಶುರು:ಕಂಟೆಂಟ್ ಬೇಸ್ಡ್ ಸಿನಿಮಾವಾಗಿರೋ ಈ ಚಿತ್ರ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಅವರ ಎರಡನೇ ಸಿನಿಮಾ. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ ಇಂಟ್ರೆಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಜನವರಿ 26ರಂದು (ನಾಳೆ, ಗುರುವಾರ) ಸಿನಿಮಾ ಸೆಟ್ಟೇರಲಿದ್ದು 27ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.
ರೋಲೆಕ್ಸ್ ಚಿತ್ರತಂಡ:ಫೀನಿಕ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಅನಿಲ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಕೆಲ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಸೋನಲ್ ಮೊಂತೆರೋ ಕೋಮಲ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ.