ನಟಿ ಸಮಂತಾ ರುತು ಪ್ರಭು ಜೊತೆ ವಿಚ್ಛೇದನ ಪಡೆದ ಬಳಿಕ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ತೆಲುಗು ಸೂಪರ್ಸ್ಟಾರ್ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮ್ಮ ಸಿನಿಮಾ ಕೆಲಸದ ಜವಾಬ್ದಾರಿಗಳ ನಡುವೆ, ಈ ಮೂವರು ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ಇದೀಗ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರವಾಗಿ ಶೋಭಿತಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ. "ನನ್ನ ಕುರಿತಾದ ಸುದ್ದಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧದ ಪ್ರಚಾರಗಳ ಬಗ್ಗೆ ನಾನು ಗಮನ ನೀಡುವುದಿಲ್ಲ. ಈ ವಿಷಯವಾಗಿ ಮಾತನಾಡಲು ನಾನು ಇಚ್ಛಿಸುವುದಿಲ್ಲ. ತಪ್ಪು ಮಾಡದ ಕಾರಣ ಮಾಧ್ಯಮದ ಮುಂದೆ ಬಂದು ವಿವರಣೆ ನೀಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಮುಂದುವರೆದು, "ಜೀವನವನ್ನು ಶಾಂತವಾಗಿಟ್ಟುಕೊಳ್ಳುವುದು ನನ್ನ ಆಲೋಚನೆ. ನನ್ನ ಗಮನ ಯಾವಾಗಲೂ ಒಂದೇ ಆಗಿರುತ್ತದೆ. ಈಗ ನಟಿಯಾಗಿ ತುಂಬಾ ಚೆನ್ನಾಗಿದ್ದೇನೆ. ಸಿನಿಮಾಗಳನ್ನು ಮಾಡುತ್ತಿದ್ದೇನೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಚಿತ್ರದಲ್ಲೂ ನಟಿಸಿದ್ದೇನೆ. ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಅವರ ಸಂಗೀತಕ್ಕೂ ನೃತ್ಯ ಮಾಡಿದ್ದೇನೆ. ಇಂತಹ ಒಳ್ಳೆ ನೆನಪುಗಳು ನನಗಿದೆ. ಹೀಗಿರುವಾಗ ನಾನು ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ. ತಪ್ಪಾಗದಿದ್ದಾಗ ಆತಂಕ ಪಡುವ ಅವಶ್ಯಕತೆಯೂ ಇಲ್ಲ" ಎಂದು ಶೋಭಿತಾ ಸ್ಪಷ್ಟಪಡಿಸಿದರು.