ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೋರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ 'ಕಾಫಿ ವಿತ್ ಕರಣ್ ಶೋ'ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೊಸ ಶೋ ಇಂದು ಒಟಿಟಿ ವೇದಿಕೆಯಲ್ಲಿ ಹೊರಬಿದ್ದಿದೆ.
ಪುತ್ರ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಜೊತೆ ಚಾಟ್ ಶೋಗೆ ಆಗಮಿಸಿದ ಶರ್ಮಿಳಾ ಠಾಗೋರ್ ಈ ವಿಷಯದ ಬಗ್ಗೆ ಮಾತನಾಡಿದರು. ಪ್ರತಿ ಗುರುವಾರ ಒಟಿಟಿ ಪ್ಲಾಟ್ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಹೊಸ ಸಂಚಿಕೆಯನ್ನು ಅನಾವರಣಗೊಳಿಸಲಾಗುತ್ತದೆ. ಇಂದು ಪ್ರಸಾರ ಕಂಡ ಹೊಸ ಸಂಚಿಕೆಯಲ್ಲಿ ಶರ್ಮಿಳಾ ಠಾಗೋರ್ ಮತ್ತು ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ತಮ್ಮ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಶರ್ಮಿಳಾ ಅವರನ್ನು ಸಂಪರ್ಕಿಸಿದ ಕ್ಷಣವನ್ನು ಅವರು ನೆನಪಿಸಿಕೊಂಡರು.
ಸೂಪರ್ ಹಿಟ್ ಅದ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಶಬಾನಾ ಅಜ್ಮಿ ನಿರ್ವಹಿಸಿದ್ದ ಪಾತ್ರಕ್ಕೆ ನಿರ್ದೇಶಕ-ನಿರ್ಮಾಪಕ ಕರಣ್ ಅವರ ಮೊದಲ ಆಯ್ಕೆ ಶರ್ಮಿಳಾ ಅವರಾಗಿದ್ದರು. ಆದ್ರೆ ಅನಾರೋಗ್ಯ ಹಿನ್ನೆಲೆಯಲ್ಲಿ ನಟಿ ಈ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಈ ಬಗ್ಗೆ ನನಗೆ ಬೇಸರವಿದೆ ಎಂದು ಜೋಹರ್ ತಿಳಿಸಿದರು. ಇದಕ್ಕೆ ನಟಿ ಪ್ರತಿಕ್ರಿಯಿಸಿದರು.