ಸಿಕ್ಕಿಂ ಮೇಘ ಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟ ಜನರ ಸಂಖ್ಯೆ 30ಕ್ಕೇರಿದೆ. ನಾಪತ್ತೆಯಾದವರ ಸಂಖ್ಯೆ 80 ದಾಟಿದೆ. ತೆಲುಗು ಚಿತ್ರರಂಗದ ಹಿರಿಯ ನಟಿ ಸರಳ ಕುಮಾರಿ ಅವರೂ ಕೂಡಾ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ನೆಲೆಸಿರುವ ಇವರ ಪುತ್ರಿ ನಬಿತಾ ತಮ್ಮ ತಾಯಿಯನ್ನು ಪತ್ತೆ ಹಚ್ಚುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಕ್ಟೋಬರ್ 2 ರಂದು ಪ್ರವಾಸ ಕೈಗೊಂಡಿದ್ದ ನಟಿ: 1983 ರಲ್ಲಿ 'ಮಿಸ್ ಆಂಧ್ರಪ್ರದೇಶ್' ಆಗಿ ಹೊರಹೊಮ್ಮಿದ ನಂತರ ಸರಳ ಕುಮಾರಿ ಸಿನಿಮಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ದಾನವೀರಶೂರಕರ್ಣ, ಸಂಘರ್ಷನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನ ಹೈಟೆಕ್ ಸಿಟಿ ಬಳಿ ನೆಲೆಸಿರುವ ಸರಳ ಕುಮಾರಿ ತಮ್ಮ ಪರಿಚಯಸ್ಥರೊಂದಿಗೆ ಅಕ್ಟೋಬರ್ 2 ರಂದು ಸಿಕ್ಕಿಂ ಪ್ರವಾಸ ತೆರಳಿದ್ದರು. ಈ ಕುರಿತು ಅಮೆರಿಕದಲ್ಲಿರುವ ಮಗಳಿಗೆ ಮಾಹಿತಿ ನೀಡಿದ್ದರು.
ಪುತ್ರಿ ನಬಿತಾ ಮಾಹಿತಿ: ಸಿಕ್ಕಿಂನ ಹೋಟೆಲ್‌ವೊಂದರಲ್ಲಿ ಅವರು ತಂಗಿದ್ದರು. ಆದರೆ, ಇತ್ತೀಚೆಗೆ ಸಂಭವಿಸಿರುವ ಪ್ರವಾಹದ ಬಳಿಕ ಸರಳ ಕುಮಾರಿ ಅವರ ಪತ್ತೆಯಿಲ್ಲ. ನಟಿಯ ಕುರಿತು ಯಾವುದೇ ಮಾಹಿತಿ ಸಿಗದ ಕಾರಣ ಮಗಳು ಕಳವಳ ವ್ಯಕ್ತಪಡಿಸಿದ್ದಾರೆ. "ಅಕ್ಟೋಬರ್ 3 ರಂದು ನಾನು ನನ್ನ ತಾಯಿಯೊಂದಿಗೆ ಕೊನೆಯ ಬಾರಿಗೆ ಮಾತನಾಡಿದೆ. ಅವರು ಯಾವುದೇ ಹೆಚ್ಚಿನ ಮಾಹಿತಿಯನ್ನು ನನಗೆ ನೀಡಲಿಲ್ಲ. ಮಾಧ್ಯಮದ ಮೂಲಕ ಪ್ರವಾಹದ ಬಗ್ಗೆ ತಿಳಿದುಕೊಂಡೆ. ಸೇನೆಯನ್ನು ಸಂಪರ್ಕಿಸಲು ಯತ್ನಿಸಿದ್ದು, ಅದು ಕೂಡ ವಿಫಲವಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಸರ್ಕಾರಕ್ಕೆ ಮನವಿ: ತಮ್ಮ ತಾಯಿಯನ್ನು ಪತ್ತೆ ಹಚ್ಚುವಂತೆ ತೆಲಂಗಾಣ ಸರ್ಕಾರಕ್ಕೆ ನಬಿತಾ ಮನವಿ ಮಾಡಿದ್ದಾರೆ.