'ಎಲ್ಲೋ ಜೋಗಪ್ಪ ನಿನ್ನರಮನೆ' ಹಾಡು ಇಂದಿಗೂ ಫೇಮಸ್ ಆಗಿದೆ. ಆದರೆ ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಹಯವದನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಎಲ್ಲೋ ಜೋಗಪ್ಪ ನಿನ್ನರಮನೆ ಟೈಟಲ್ನಿಂದಲೇ ಕುತೂಹಲ ಮೂಡಿಸುತ್ತಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಸಿನಿ ಪ್ರಿಯರ ಗಮನ ಸೆಳೆದಿದೆ.
ಅಲ್ಲದೇ ಚಿತ್ರತಂಡ ಸಿನಿಮಾ ನಾಯಕಿಯನ್ನು ಇತ್ತೀಚೆಗಷ್ಟೇ ಪರಿಚಯಿಸಿತ್ತು. ಇದೀಗ ಮತ್ತೊಬ್ಬ ಪ್ರತಿಭಾನ್ವಿತ ನಟಿ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ವೆನ್ಯಾ ರೈ ಎಂಬ ಯುವ ಪ್ರತಿಭೆಯನ್ನು ನಾಯಕಿಯಾಗಿ ಪರಿಚಯಿಸಿರುವ ಸಿನಿಮಾ ತಂಡ ಇದೀಗ ಚಿತ್ರಕ್ಕೆ ಮತ್ತೊಬ್ಬ ನಟಿ ಸಂಜನಾ ದಾಸ್ರನ್ನು ಕರೆ ತಂದಿದೆ. ಕನ್ನಡದಲ್ಲಿ ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂ ನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಹಯವದನ ನಿರ್ದೇಶನದ 'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ತಂಡವು ಮಹಾರಾಷ್ಟ್ರದಲ್ಲಿಎರಡನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರದಲ್ಲಿ ‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ತಂದೆ ಮಗನ ಬಾಂಧವ್ಯದ ಜೊತೆಗೆ ಪ್ರೇಮ್ ಕಹಾನಿ, ಕಾಮಿಡಿ ಹಾಗೂ ಸೆಂಟಿಮೆಂಟ್ ಎಲಿಮೆಂಟ್ ಗಳನ್ನು ಒಳಗೊಂಡ ಕಥೆ ಇದಾಗಿದೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡ ಗೌಡ, ದಿನೇಶ್ ಮಂಗಳೂರು, ಬಿರಾದರ್ ಒಳಗೊಂಡ ದೊಡ್ಡ ತಾರಾ ಬಳಗವಿದೆ.
ಇದನ್ನೂ ಓದಿ:50 ದೇಶ, 5 ಭಾಷೆ: ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ 'ಕಬ್ಜ'