ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾ ಅಪ್ಡೇಟ್ಸ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿರೋ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಪೂರ್ಣಗೊಂಡಿದೆ. ಸಂತಸದ ವಿಷಯ ಅಂದ್ರೆ ಸಂತೋಷ್ ಆನಂದ್ ರಾಮ್ ನುಡಿದಂತೆ ಕನ್ನಡತಿಯನ್ನೇ ಯುವ ರಾಜ್ಕುಮಾರ್ ಚೊಚ್ಚಲ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ಯುವ ರಾಜ್ಕುಮಾರ್ ಅವರ ಸ್ಯಾಂಡಲ್ವುಡ್ ಎಂಟ್ರಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ದೇಹ ದಂಡಿಸಿ ಪಾತ್ರಕ್ಕೆ ಹೊಂದುವಂತೆ ಯುವ ರಾಜ್ಕುಮಾರ್ ರೆಡಿಯಾಗ್ತಿದ್ರೆ, ಇತ್ತ ಯುವನಿಗೆ ಹೊಂದಿಕೆ ಆಗುವ ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬ್ಯುಸಿಯಾಗಿದ್ರು. ಕನ್ನಡದ ಸ್ಟಾರ್ ಕಿಡ್ಸ್ ಈ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಡ್ತಾರೆ ಅಂತಾ ಹೇಳಲಾಗಿತ್ತು. ಅದ್ರೆ ಅವರು ಯಾರೂ ಕೂಡ ಈ ಚಿತ್ರದ ಪಾತ್ರಕ್ಕೆ ಹೊಂದುವುದಿಲ್ಲ ಅನ್ನೋ ಕಾರಣಕ್ಕೆ ಚಿತ್ರತಂಡ ಸೈಲೆಂಟ್ ಆಗಿತ್ತು.
ಅಲ್ಲದೇ ಯುವನಿಗಾಗಿ ಮಲಯಾಳಂನ ಬೆಡಗಿ ಕಲ್ಯಾಣಿ ಪ್ರಿಯದರ್ಶಿನಿಯವರನ್ನು ಚಿತ್ರತಂಡ ಫೈನಲ್ ಮಾಡಿಕೊಂಡಿತ್ತು. ಅದರೆ ಕಲ್ಯಾಣಿ ಪ್ರಿಯದರ್ಶಿನಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಚಿತ್ರಕ್ಕೆ ಅವರ ಹೆಸರನ್ನು ಕೈ ಬಿಟ್ಟ ಸಂತೋಷ್ ಆನಂದ್ ರಾಮ್ ಕನ್ನಡದ ನಟಿಯನ್ನೇ ತಮ್ಮ ಚಿತ್ರಕ್ಕೆ ನಾಯಕಿಯಾಗಿ ಫೈನಲ್ ಮಾಡಿದ್ದಾರೆ.
ಹೌದು, ಅಣ್ಣಾವ್ರ ಮೊಮ್ಮಗನ ಮೊದಲ ಸಿನಿಮಾಗೆ ಕನ್ನಡದ ನಟಿಯನ್ನೇ ಕರೆತರಲು ಹೊಂಬಾಳೆ ಫಿಲ್ಮ್ ಸಂಸ್ಥೆ ಪಣ ತೊಟ್ಟಿತ್ತು. ಮಾಲಾಶ್ರೀ ಮಗಳು, ಸುಧಾರಾಣಿ ಪುತ್ರಿ, ಉಪ್ಪಿ ಮಗಳು ಹೀಗೆ ಕೆಲವರನ್ನು ಚಿತ್ರಕ್ಕೆ ಕರೆತರುವ ಯೋಚನೆ ನಡೆದಿತ್ತು. ಆದ್ರೀಗ ಹೊಂಬಾಳೆ ಬಳಗಕ್ಕೆ ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿರೋ ರುಕ್ಮಿಣಿ ವಸಂತ್ ಕಂಡಿದ್ದಾರೆ. ಚಿತ್ರದ ಪಾತ್ರಕ್ಕೆ ರುಕ್ಮಿಣಿ ಹೊಂದುವ ಕಾರಣ ಅವರನ್ನೇ ಚಿತ್ರಕ್ಕೆ ನಾಯಕಿಯಾಗಿ ಫೈನಲ್ ಅನ್ನೋ ಸುದ್ದಿ ಈಟಿವಿ ಭಾರತಕ್ಕೆ ಸಿಕ್ಕಿದೆ. ಆದ್ರೆ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.