ಸ್ಪೂಕಿ ಕಾಲೇಜು ಚಂದನವನದಲ್ಲಿ ಹಲವು ವಿಶೇಷತೆಗಳಿಂದ ಟಾಕ್ ಆಗುತ್ತಿರುವ ಚಿತ್ರ. ಟೀಸರ್ ಮೂಲಕ ಈಗಾಗಲೇ ಜನಮನ ಗೆದ್ದಿರುವ "ಸ್ಪೂಕಿ ಕಾಲೇಜ್'' ಚಿತ್ರದಲ್ಲಿ ಡಾ. ರಾಜಕುಮಾರ್ ಅಭಿನಯದ ವೀರಕೇಸರಿ ಚಿತ್ರದ ಪ್ರಖ್ಯಾತ 'ಮೆಲ್ಲುಸಿರೆ ಸವಿಗಾನ' ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ಏಕ್ ಲವ್ ಯಾ ಚಿತ್ರದ ಸುಂದರಿ ರೀಷ್ಮಾ ನಾಣಯ್ಯ ಸೊಂಟ ಬಳುಕಿಸಿದ್ದಾರೆ. ಈ ಹಾಡು ಇದೇ ನವೆಂಬರ್ 14ರಂದು ಬಿಡುಗಡೆಯಾಗಲಿದೆ.
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಸ್ಪೂಕಿ ಕಾಲೇಜ್ ಸಿನಿಮಾ ನಾಯಕ. ದಿಯಾ ಖ್ಯಾತಿಯ ಖುಷಿ ರವಿ ಚಿತ್ರದ ನಾಯಕಿ. ಇವರಲ್ಲದೇ, ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ "ಕಾಮಿಡಿ ಕಿಲಾಡಿಗಳು" ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕ್ರಿಯಾಶೀಲ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ "ಸ್ಪೂಕಿ ಕಾಲೇಜ್" ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಅಣಿಯಾಗುತ್ತಿದೆ. ಧಾರವಾಡದ ಶತಕಕ್ಕೂ ಮೀರಿದ ಇತಿಹಾಸವಿರುವ ಪುರಾತನ ಕಾಲೇಜಿನಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ದಾಂಡೇಲಿ ಅಭಯಾರಣ್ಯದಲ್ಲಿ ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆದಿದೆ. ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೇ ಬರೆದಿದ್ದಾರೆ.