ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಅನ್ನು ಕೀಳಾಗಿ ನೋಡಿದ ಆರೋಪದಡಿ ಕನ್ನಡ ಚಿತ್ರರಂಗದಿಂದ ತನ್ನನ್ನು ಬ್ಯಾನ್ ಮಾಡಬೇಕೆಂಬ ಬೇಡಿಕೆಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. "ನಾನು ಅವರನ್ನು ಪ್ರೀತಿಸುತ್ತೇನೆ, ಉಳಿದದ್ದು ಅವರಿಗೆ ಬಿಟ್ಟದ್ದು" ಎಂದು ನಟಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗ, ಕಿರಿಕ್ ಪಾರ್ಟಿ ಚಿತ್ರತಂಡದ ಮೇಲಿನ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.
ಕಾಂತಾರ ಖ್ಯಾತಿಯ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಸೂಪರ್ ಹಿಟ್ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಚಾರ್ಲಿ 777 ಖ್ಯಾತಿಯ ರಿಷಬ್ ಶೆಟ್ಟಿ ಗೆಳೆಯ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರದ ನಾಯಕ. ಅಂದು ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಪ್ರೀತಿಯಲ್ಲಿ ಬಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ, ರಶ್ಮಿಕಾ ಟಾಲಿವುಡ್ ಚಿತ್ರರಂಗದಲ್ಲಿ ಯಶಸ್ವಿ ನಟಿಯಾದರು.
ಹೊಂದಾಣಿಕೆಯಾಗದ ಕಾರಣ ಅಂದು ತಮ್ಮ ನಿಶ್ಚಿತಾರ್ಥವನ್ನು ಈ ಜೋಡಿ ರದ್ದುಗೊಳಿಸಿತ್ತು. ಇತ್ತೀಚೆಗೆ, ಸಿನಿಮಾ ಇಂಡಸ್ಟ್ರಿಗೆ ರಶ್ಮಿಕಾ ಅವರ ಲಾಂಚ್ ಬಗ್ಗೆ ಕೇಳಿದಾಗ, ರಶ್ಮಿಕಾ ಪ್ರೊಡಕ್ಷನ್ ಹೌಸ್ ಅಥವಾ ನಿರ್ದೇಶಕರ ಹೆಸರನ್ನು ತೆಗೆದುಕೊಂಡಿಲ್ಲ. ಅವರು ಕೈಬೆರಳ ಸನ್ನೆ (air quotes) ಮೂಲಕ "ಅಂದು ಈ ಪ್ರೊಡಕ್ಷನ್ ಹೌಸ್ ನನ್ನನ್ನು ಸಂಪರ್ಕಿಸಿತು'' ಎಂದು ಹೇಳಿದ್ದರು. ಇದು ಸಾಕಷ್ಟು ಟೀಕೆಗೆ ಎಡೆಮಾಡಿಕೊಟ್ಟಿದೆ.
ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರ ಮೇಲಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅದಾದ ಬಳಿಕ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇಕೆಂಬ ಬೇಡಿಕೆ ಅನ್ನು ಕನ್ನಡಾಭಿಮಾನಿಗಳು, ವಿಶೇಷವಾಗಿ ರಿಷಬ್, ರಕ್ಷಿತ್ ಅಭಿಮಾನಿಗಳು ಇಟ್ಟಿದ್ದಾರೆ.
ಇದಕ್ಕೂ ಮೊದಲು ಇದೇ ಬ್ಯಾನ್ ವಿಚಾರವಾಗಿ ನಟಿ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಗಾಳಿ ಸುದ್ದಿಯನ್ನು ಅಲ್ಲಗಳೆದು, ತಮ್ಮ ಮೇಲೆ ಯಾವುದೇ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ; ತನ್ನ ಮೇಲೆ ಹೇರಿದ ನಿಷೇಧದ ಬಗ್ಗೆ ರಶ್ಮಿಕಾ ಕ್ಲಾರಿಟಿ!
''ನಾನು ಕಾಂತಾರ ಸಿನಿಮಾ ನೋಡಿದ ಬಳಿಕ ತಂಡಕ್ಕೆ ಸಂದೇಶ ಕಳುಹಿಸಿದ್ದೆ. ಈ ತರಹದ ಮಾತುಕತೆ ಆಗಲಿ ಅಥವಾ ನಟರ ನಡುವೆ ಏನಾಗುತ್ತಿದೆ ಎಂಬುದಾಗಲಿ ಹೊರಗಿನವರಿಗೆ ಗೊತ್ತಾಗುವುದಿಲ್ಲ. ನನ್ನ ಖಾಸಗಿ ವಿಷಯಗಳನ್ನು ಕ್ಯಾಮರಾದಲ್ಲಿ ಇಟ್ಟುಕೊಂಡು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ. ಆ ಸಂದೇಶಗಳನ್ನು ಸಹ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಅದು ನನ್ನ ವೈಯಕ್ತಿಕ ಜೀವನ. ಸಾರ್ವಜನಿಕರ ಮುಂದೆ ಅದನ್ನು ಹೇಳಬೇಕಾಗಿಲ್ಲ. ನಾನು ನಟಿಯಾಗಿ ಯಾವ ಚಿತ್ರ ಮಾಡುತ್ತಿದ್ದೇನೆ, ಯಾವ ಪಾತ್ರ ಮಾಡುತ್ತಿದ್ದೇನೆ, ಯಾವ ಚಿತ್ರ ಹೇಗಿದೆ ಅನ್ನೋದನ್ನು ಮಾತ್ರ ಬಹಿರಂಗಪಡಿಸಬಹುದು. ವೃತ್ತಿ ಬಗ್ಗೆ ಏನು ಮಾಡುತ್ತಿದ್ದೇನೆ ಎಂಬುದನ್ನು ಪ್ರೇಕ್ಷಕರಿಗೆ ಹೇಳುವುದು ನನ್ನ ಜವಾಬ್ದಾರಿ. ಅದನ್ನಷ್ಟೇ ಮಾಡಿಕೊಂಡು ಬರುತ್ತಿದ್ದೇನೆ'' ಎಂದು ಹೇಳುವ ಮೂಲಕ ಗುಪ್ತ ವಿಚಾರಗಳನ್ನು ಗುಪ್ತವಾಗಿಯೇ ಇಟ್ಟಿದ್ದಾರೆ.