ಜಗ್ಗೇಶ್ ಜೊತೆ ರಮ್ಯಾ ಮಾತುಕತೆ ನವರಸನಾಯಕ ಜಗ್ಗೇಶ್ ಹಾಗೂ ಮೋಹಕ ತಾರೆ ರಮ್ಯಾ ಅವರು ಒಟ್ಟಿಗೆ ಕಾಣಿಸಿಕೊಂಡು 7 ವರ್ಷಗಳೇ ಕಳೆದಿವೆ. ನೀರ್ದೋಸೆ ಚಿತ್ರದಿಂದ ಹೊರ ಬಂದ ನಂತರ ರಮ್ಯಾ ಹಾಗೂ ಜಗ್ಗಣ್ಣನ ನಡುವೆ ಕೋಲ್ಡ್ ವಾರ್ ನಡೆಯುತ್ತಿತ್ತು ಎನ್ನಲಾಗಿತ್ತು. ಎದುರು ಬದುರು ಸಿಗದಿದ್ರೂ ಟ್ವಿಟರ್ನಲ್ಲೇ ವಾರ್ ನಡೆಸುತ್ತಿದ್ದ ಇವರೀಗ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ರೆ 2016ರಲ್ಲಿ ತೆರೆಕಂಡ ನೀರ್ದೋಸೆ ಚಿತ್ರದಲ್ಲಿ ರಮ್ಯಾ ಮತ್ತು ಜಗ್ಗೇಶ್ ಅಭಿನಯಿಸುವ ಮೂಲಕ ಸಿನಿಪ್ರಿಯರನ್ನು ರಂಜಿಸಬೇಕಿತ್ತು. ಆದರೆ ರಮ್ಯಾ ಸಡನ್ ಆಗಿ ನೀರ್ದೋಸೆ ಸಿನಿಮಾ ಬೇಡ ಎಂದು ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ರು. ಇದಾದ ನಂತರ ಈ ಕಲಾವಿದರ ನಡುವೆ ವೈಮನಸ್ಸು ಮೂಡಿತ್ತು ಎನ್ನಲಾಗಿತ್ತು. ಈ ಮೈಮನಸ್ಸು ಹೇಗಿತ್ತು ಅಂದ್ರೆ, ರಮ್ಯಾ ಮತ್ತು ಜಗ್ಗೇಶ್ ಸಿನಿಮಾದಲ್ಲಾಗಲಿ, ಮುಖಾಮುಖಿಯಾಗಿ ಆಗಲಿ ಒಂದು ಬಾರಿಯೂ ಭೇಟಿಯಾಗದೇ ರಾಜಕೀಯದ ನೆಪದಲ್ಲಿ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಾ ಕೋಲ್ಡ್ ವಾರ್ನಲ್ಲೇ ಕಾಲ ಕಳೆಯುತ್ತಿದ್ರು.
ಜಗ್ಗೇಶ್ ಜೊತೆ ರಮ್ಯಾ ಮಾತುಕತೆ:ಇದನ್ನು ಗಮನಿಸಿದ ಅಭಿಮಾನಿಗಳು ಆತ್ಮೀಯ ಸ್ನೇಹಿತರಾಗಿದ್ದ ಜಗ್ಗಣ್ಣ ಮತ್ತು ಪದ್ಮಾವತಿ ನೀರ್ದೋಸೆ ಚಿತ್ರದಿಂದ ದೂರ ಆಗೋದ್ರು ಅಂತಾ ಬೇಸರ ಪಟ್ಟಿದ್ದರು. ಆದರೆ, ಈಗ ಈ ಜೋಡಿ ಮತ್ತೆ ಏಳು ವರ್ಷಗಳ ಬಳಿಕ ಎದುರು ಬದುರು ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.
ಕನ್ನಡ ಚಲನಚಿತ್ರ ಕಪ್ ಕಾರ್ಯಕ್ರಮ:ಹೌದು, ರಮ್ಯಾ ಮತ್ತು ಜಗ್ಗೆಶ್ ಒಟ್ಟಿಗೆ ಕುಳಿತು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಸಿನಿಮಾ ಮಂದಿಯನ್ನು ಗೊಂದಲಕ್ಕೆ ಒಳಪಡಿಸಿದ್ದಾರೆ. ಸ್ಯಾಂಡಲ್ವುಡ್ ಕಲಿಗಳ ಕ್ರಿಕೆಟ್ನ ರಣಕಣವಾದ ಕನ್ನಡ ಚಲನಚಿತ್ರ ಕಪ್‌ನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಅಭಿಮಾನಿಗಳು ಖುಷ್: ಕರ್ನಾಟಕ ಚಲನಚಿತ್ರ ಕಪ್‌ನ ಮೂರನೇ ಸೀಸನ್ ಫೆಬ್ರವರಿ 24 ಹಾಗೂ 25 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಎಲ್ಲಾ ತಂಡಗಳ ಆಟಗಾರರ ಆಯ್ಕೆ ಮಾಡುವ ಸಲುವಾಗಿ ನಿನ್ನೆ ಕಿಚ್ಚ ಸುದೀಪ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಲರ್ಪುಲ್ ಇವೆಂಟ್ ಮಾಡಿದ್ರು. ಈ ಇವೆಂಟ್ಗೆ ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ ನಟರು ಸಾಕ್ಷಿಯಾಗಿದ್ರು. ಅಲ್ಲದೇ ಈ ಕಾರ್ಯಕ್ರಮಕ್ಕೆ ಮೋಹಕತಾರೆ ರಮ್ಯಾ ಮತ್ತು ಜಗ್ಗೇಶ್ ಕೂಡ ಆತಿಥಿಗಳಾಗಿ ಆಗಮಿಸಿ ಒಟ್ಟಿಗೆ ಕಾಣಿಸುವ ಮೂಲಕ ತಮ್ಮ 7 ವರ್ಷಗಳ ಮುನಿಸಿಗೆ ಎಳ್ಳು ನೀರು ಬಿಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ದೃಶ್ಯ ನೋಡಿ ಚಿತ್ರರಂಗದವರು, ಸಿನಿಪ್ರಿಯರು ಫುಲ್ ಖುಷ್ ಆಗಿದ್ದಾರೆ.
ಜಗ್ಗೇಶ್ ಜೊತೆ ರಮ್ಯಾ ನಟನೆ:ಇನ್ನೂ ರಮ್ಯಾ ಮತ್ತು ಜಗ್ಗೆಶ್ ಅವರನ್ನು ಒಂದೇ ವೇದಿಕೆಯಲ್ಲಿ ನೋಡಿದ ಸಿನಿಮಾ ಮಂದಿ ಈಗ ಹೊಸ ಲೆಕ್ಕಾಚಾರಕ್ಕೆ ಕೈ ಹಾಕಿದ್ದಾರೆ. ಮತ್ತೆ ಈ ಜೋಡಿ ಒಂದಾಗೋದು ಡೌಟ್ ಅನ್ನೋ ಮಟ್ಟಿಗೆ ಇದ್ದವರು ಈಗ ಅಕ್ಕ ಪಕ್ಕ ಕುಳಿತು ಕೆಲಕಾಲ ಮಾತನಾಡಿದ್ದಾರೆ. ಹಾಗಾಗಿ ರಮ್ಯಾ ಮುಂದಿನ ದಿನಗಳಲ್ಲಿ ಜಗ್ಗಣ್ಣನ ಜೊತೆ ನಟಿಸ್ತಾರಾ ಅನ್ನೋ ಕುತೂಹಲ ಮೂಡಿದೆ.
ಇದಲ್ಲದೇ, ಇದೇ ವೇದಿಕೆಯಲ್ಲಿ ನಿರ್ಮಾಪಕ ಮುನಿರತ್ನ ಕೂಡ ರಮ್ಯಾ ಆಗಮನಕ್ಕೆ ಆಶ್ಚರ್ಯ ವ್ಯಕ್ತಪಡಿಸೋದ್ರ ಜೊತೆಗೆ ರಮ್ಯಾ ಅವರನ್ನು ಹೊಗಳಿ ಅಟ್ಟಕ್ಕೇರಿಸಿದರು. ಸ್ಯಾಟಲೈಟ್ ಹಾಕಿ ಹುಡುಕಿದ್ರೂ ಸಿಗದಿದ್ದವರನ್ನು ಇಲ್ಲಿ ನೋಡುತ್ತಿದ್ದೇವೆ. ಯಾವ ಕ್ಯಾಮರಾದಲ್ಲೂ ಸಿಗದವರನ್ನು ಇಲ್ಲಿ ನೋಡುವ ಅವಕಾಶ ಸಿಕ್ಕಿದೆ. ನಾನು ಎಷ್ಟು ಬಾರಿ ಕರೆ ಮಾಡಿದರೂ ಕೂಡ ಫೋನಿಗೂ ಸಿಗುತ್ತಿರಲಿಲ್ಲ ಎಂದು ಮುನಿರತ್ನ ರಮ್ಯಾ ಅವರ ಬಗ್ಗೆ ತಮಾಷೆ ಮಾಡಿದರು.
ಇದನ್ನೂ ಓದಿ:ಫೆಬ್ರವರಿ 24 ರಿಂದ ಕೆಸಿಸಿ ಟೂರ್ನಿ ಆರಂಭ: ಸ್ಯಾಂಡಲ್ವುಡ್ ಸ್ಟಾರ್ಸ್‌ಗೆ ಕ್ರಿಕೆಟ್ ಹಬ್ಬ
ಇನ್ನೂ ರಮ್ಯಾ - ಜಗ್ಗೇಶ್ ಮಾತು ಹಾಗೂ ಮುನಿರತ್ನ ಅವರ ಹೊಗಳಿಕೆ ನೋಡಿದ ಜನರು ರಮ್ಯಾ ಏನಾದ್ರು ಮುಂದಿನ ದಿನಗಳಲ್ಲಿ ಬಿಜೆಪಿ ಕಡೆಗೆ ಪಯಣ ಬೆಳೆಸುತ್ತಾರಾ? ಎಂದು ಚರ್ಚೆ ಶುರು ಮಾಡಿದ್ದಾರೆ. ಸದ್ಯ ರಾಜಕೀಯದಿಂದ ದೂರ ಇದ್ದಂತೆ ಕಾಣ್ತಿರುವ ರಮ್ಯಾ ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲೇ ಇರ್ತಾರಾ ಅಥವಾ ರಾಜಕೀಯದ ಕಡೆ ಮತ್ತೆ ಮುಖ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.