ಕೆಜಿಎಫ್ 2 ಹಿಂದಿ ಚಿತ್ರದ ಸುಲ್ತಾನ್ ಹಾಡನ್ನು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ಅನುಮತಿ ಪಡೆಯದೇ ಭಾರತ್ ಜೋಡೋ ಯಾತ್ರೆಯಲ್ಲಿ ಬಳಸಿರುವ ಆರೋಪದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಎಂಆರ್‌ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ದಾವೆ ಹೂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಕಿಡಿಕಾರಿದ್ದಾರೆ.
ಎಂಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ. ಆದರೆ, ಎಂಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆಯದೇ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರದ ಹಿಂದಿ ಗೀತೆ ಬಳಕೆ ಸಂಬಂಧ ಎಂಆರ್‌ಟಿ ಮ್ಯೂಸಿಕ್ ಕಂಪನಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು.
ಕೆಜಿಎಫ್ ಚಿತ್ರದ ಲೇಬಲ್ ಅನ್ನು ಲಹರಿ ಸಂಸ್ಥೆ ಪಡೆದಿದೆ. ಇದನ್ನೇ ಮುಂದಿಟ್ಟುಕೊಂಡು ರಮ್ಯಾ ಟ್ವೀಟ್ ಒಂದಕ್ಕೆ ರಿಟ್ವೀಟ್ ಮಾಡಿ ಲಹರಿ ವೇಲು ವಿರುದ್ಧ ಆರೋಪಿಸಿದ್ದಾರೆ.
ಲಹರಿ ವೇಲು ಅವರು ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ನಡೆಸುತ್ತಿದ್ದಾರೆಯೇ?, ಕೆಜಿಎಫ್ ಹಾಡುಗಳನ್ನು ಎಲ್ಲರೂ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಅದಕ್ಕೆಲ್ಲ ಆಕ್ಷೇಪ ಎತ್ತದ ಲಹರಿ ವೇಲು ಅವರಿಗೆ ಕಾಂಗ್ರೆಸ್ ಬಳಸಿಕೊಂಡಾಗ ಮಾತ್ರ ಸಮಸ್ಯೆಯಾಗಿದೆಯೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಕಾಂಗ್ರೆಸ್, ಭಾರತ್ ಜೋಡೋದ ಅಧಿಕೃತ ಟ್ವಿಟರ್ ಖಾತೆ ಅಮಾನತು ಆದೇಶ ರದ್ದು
ಸದ್ಯ ಪ್ರಕರಣ ಸಂಬಂಧ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ಸಿ) ಮತ್ತು ಭಾರತ್ ಜೋಡೋದ ಅಧಿಕೃತ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಟ್ವಿಟರ್ ಸಂಸ್ಥೆಗೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಅಲ್ಲದೆ, ಆ ಹಾಡನ್ನು ಕಾಂಗ್ರೆಸ್ ಟ್ವಿಟ್ಟರ್ನಿಂದ ತೆಗೆಯುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ:ಕೆಜಿಎಫ್ 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ಬಳಕೆ: ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಕೇಸ್