ಶನಿವಾರ ಮಧ್ಯಾಹ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ವರ್ಸಸ್ ಪಾಕ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಭಾರತ ತನ್ನ ಎದುರಾಳಿಯನ್ನು 8ನೇ ಬಾರಿಗೆ ಸೋಲಿಸಿ ದಾಖಲೆ ಬರೆದಿದೆ. ನಿನ್ನೆಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ರುಚಿ ಕಂಡಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಅದ್ಭುತ ಆಟದ ಪ್ರದರ್ಶನ ನೀಡಿದೆ. ಈ ಯಶಸ್ಸಿಗೆ ಜನಸಾಮಾನ್ಯರ ಜೊತೆಗೆ ಚಿತ್ರರಂಗವೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿ, ಭಾರತ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಖ್ಯಾತಿಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಹೈವೋಲ್ಟೇಜ್ ಮ್ಯಾಚ್ಗೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಕೂಡ ತಮ್ಮ ಸ್ನೇಹಿತರೋರ್ವರೊಂದಿಗೆ ಪಂದ್ಯ ವೀಕ್ಷಿಸಿದ್ದಾರೆ.
ಭಾರತ ಪಾಕಿಸ್ತಾನ ಪಂದ್ಯ ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿರುವ ಮೋಹಕತಾರೆ ಭಾರತ ಗೆದ್ದ ಖುಷಿ ವ್ಯಕ್ತಪಡಿಸಿ, ಪರಿಸರ ಮಾಲಿನ್ಯಕ್ಕೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ''ಉತ್ತಮ ಪಂದ್ಯವಾಗಿತ್ತು, ನಾವು ಗೆದ್ದಿದ್ದೇವೆ. ನನ್ನ ಲಕ್ಕಿ ಚಾರ್ಮ್ ಸಂಜೀವ್ ಜೊತೆ ಪಂದ್ಯ ವೀಕ್ಷಿಸಿದೆ. ನಿರಾಶೆಗೊಳಿಸಲಿಲ್ಲ. ನಾವು ಗೆದ್ದೆವು. ಆಹಾರ ಉತ್ತಮವಾಗಿತ್ತು. ಆದರೆ ವಿಡಿಯೋ ನನ್ನ ಹೃದಯ ಕದಲಿಸಿತು. ಏಕೆ ಭಾರತ, ಏಕೆ? ಸ್ವಚ್ಛತೆ ಎಲ್ಲಿದೆ?'' ಎಂದು ಬರೆದುಕೊಂಡಿದ್ದಾರೆ. ತಮ್ಮ ಸೆಲ್ಫಿ, ಕ್ರೀಡಾಂಗಣದ ನೋಟ ಹಂಚಿಕೊಳ್ಳುವ ಜೊತೆಗೆ ಕಸದ ರಾಶಿಯ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ಹೀಗೆ ಜನರು ಪರಿಸರ ಮಾಲಿನ್ಯ ಮಾಡಿರುವುದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಹಂಚಿಕೊಂಡಿರುವ ಪೋಸ್ಟ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.