ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ಎಂದು ಕರೆಸಿಕೊಳ್ಳುವ ನಟಿ ರಕ್ಷಿತಾ ಪ್ರೇಮ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1984ರ ಮಾರ್ಚ್ 31 ರಂದು ಜನಿಸಿದ ಇವರು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಸದ್ಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ. ಜೊತೆಗೆ, ಹೆಚ್ಚು ಸಮಯವನ್ನು ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದಾರೆ.
ಕ್ರೇಜಿ ಕ್ವೀನ್ ಸಿನಿ ಪಯಣ: ರಕ್ಷಿತಾ 2002 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆಗಿನ 'ಅಪ್ಪು' ಸಿನಿಮಾದ ಮೂಲಕ ಚಂದನವನಕ್ಕೆ ಪ್ರವೇಶ ಪಡೆದರು. ಈ ಚಿತ್ರ ತೆರೆಗೆ ಬಂದ ದಿನವೇ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿತ್ತು. ಜೊತೆಗೆ ರಕ್ಷಿತಾ ನಟನೆ ಕನ್ನಡಿಗರ ಮನ ಗೆದ್ದಿತು. ಬಳಿಕ ಧಮ್, ವಿಜಯ ಸಿಂಹ, ಕಲಾಸಿಪಾಳ್ಯ, ಮಂಡ್ಯ, ತನನಂ ತನನಂ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ರಕ್ಷಿತಾ ನಾಯಕಿಯಾಗಿ ನಟಿಸಿದರು.
ಅದರಲ್ಲೂ ರಕ್ಷಿತಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಅಯ್ಯ ಮತ್ತಿತ್ತರ ಸಿನಿಮಾದಲ್ಲಿನ ಇವರ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದರು. ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ರಕ್ಷಿತಾ ಅಭಿನಯಿಸಿದ್ದಾರೆ. ಜ್ಯೂನಿಯರ್ ಎನ್ಟಿಆರ್, ರವಿತೇಜಾ ಸೇರಿದಂತೆ ಪ್ರಮುಖ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ನಿರ್ದೇಶಕ ಪ್ರೇಮ್ ಜೊತೆ ವಿವಾಹ: 2007ರಲ್ಲಿ ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಪ್ರೀತಿಸಿ ವಿವಾಹವಾದ ಇವರು ಬಳಿಕ ರಕ್ಷಿತಾ ಪ್ರೇಮ್ ಆದರು. ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ. ಮದುವೆಯಾದ ಮೇಲೆ ಫ್ಯಾಮಿಲಿ ಜೊತೆ ಇರಲು ಬಯಸಿದ ರಕ್ಷಿತಾ ಸಿನಿಮಾಗಳಿಗೂ ಗುಡ್ ಬಾಯ್ ಹೇಳಿದ್ರು. ಸದ್ಯ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.