ಕನ್ನಡ ಚಿತ್ರರಂಗದ ಬ್ಯೂಟಿಫುಲ್ ತಾರೆ ರಾಧಿಕಾ ಪಂಡಿತ್ ಅವರು ಕೆಲವು ವರ್ಷಗಳಿಂದ ಸಿನಿರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಅಭಿಮಾನಿಗಳಿಗೆ ಅವರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ತಮ್ಮ ಫ್ಯಾನ್ಸ್ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ.
ಇಂದು ಮಿಸಸ್ ರಾಮಾಚಾರಿ 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನವನ್ನು ಸ್ಪೆಷಲ್ ಆಗಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡುತ್ತಿದ್ದರು. ಈ ಬಾರಿ ತಾವು ಮನೆಯಿಂದ ದೂರ ಇರುವುದಾಗಿ ತಿಳಿಸಿದ್ದಾರೆ. ದೂರದ ಊರಿನಲ್ಲಿ ಬರ್ತ್ಡೇ ಆಚರಿಸಿಕೊಳ್ಳುತ್ತಿರುವುದಾಗಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್
"ಇದೇ ಮೊದಲ ಬಾರಿಗೆ ಮನೆಯಿಂದ ದೂರ ಹೋಗಿ ನನ್ನ ಬರ್ತ್ಡೇ ಸೆಲೆಬ್ರೇಟ್ ಮಾಡುತ್ತಿದ್ದೇನೆ. ನನ್ನ ಪ್ರೀತಿಯ ಫ್ಯಾನ್ಸ್ಗೆ ಇದರಿಂದ ಬೇಸರ ಆಗಬಹುದೆಂದು ನನಗೆ ಗೊತ್ತಿದೆ. ಹಾಗಾಗಿ ಒಂದು ಆ್ಯಕ್ಟಿವಿಟಿ ಪ್ಲ್ಯಾನ್ ಮಾಡಿದ್ದೇನೆ. ಆ ಮೂಲಕ ನಿಮ್ಮ ಸಂಪರ್ಕದಲ್ಲಿ ನಾನಿರಬಹುದು" ಎಂದು ರಾಧಿಕಾ ತಮ್ಮ ಫೋಟೋ ಹಂಚಿಕೊಂಡು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯಾಗಿದೆ. ಫ್ಯಾನ್ಸ್ ಒಟ್ಟು ಸೇರಿ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ರಾಧಿಕಾ ತಮ್ಮ ಹುಟ್ಟುಹಬ್ಬಕ್ಕೆ ಎಲ್ಲಿಗೆ ತೆರಳುತ್ತಿದ್ದಾರೆ ಎಂಬುದು ರಿವೀಲ್ ಆಗಿಲ್ಲ. ಕೆಲವೊಂದಿಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನದ ಪ್ರಯುಕ್ತ ಹಲವು ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ದುಬೈನಲ್ಲಿ ಯಶ್ ಹುಟ್ಟುಹಬ್ಬ: ಜನವರಿ 8 ರಂದು ಯಶ್ ಜನ್ಮದಿನವಿತ್ತು. ಆ ದಿನ ಅವರೂ ಕೂಡ ತಮ್ಮ ಅಭಿಮಾನಿಗಳ ಕೈಗೆ ಸಿಕ್ಕಿರಲಿಲ್ಲ. ಕುಟುಂಬ ಮತ್ತು ಆಪ್ತ ಸ್ನೇಹಿತರೊಂದಿಗೆ ದುಬೈನಲ್ಲಿ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದರು.
ಚಂದನವನದ ಮಾದರಿ ದಂಪತಿ: ಯಶ್ ಮತ್ತು ರಾಧಿಕಾ ಮೊಗ್ಗಿನ ಮನಸು ಸಿನಿಮಾ ಮೂಲಕ ಜೊತೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ಬಳಿಕ ಈ ಜೋಡಿ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅದಾಗಲೇ ಇವರಿಬ್ಬರು ಜಸ್ಟ್ ಪ್ರೆಂಡ್ಸ್ ಅಲ್ಲ ಎಂಬುದು ಕನ್ನಡ ಪ್ರೇಕ್ಷಕರಿಗೆ ಅರಿವಾಗಿತ್ತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ಈ ಎಲ್ಲಾ ಗಾಸಿಪ್ಗಳಿಗೆ ವಿದಾಯ ಹೇಳಿ ಕನ್ನಡಕ್ಕೆ ಹೊಸ ತಾರಾ ಜೋಡಿಯನ್ನು ನೀಡುವ ಭರವಸೆ ಕೊಟ್ಟಿತು. ಇದಾಗಿ ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 9, 2016ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು. ತಾರಾ ದಂಪತಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮುದ್ದು ಮಕ್ಕಳಿದ್ದಾರೆ.
ಇದನ್ನೂ ಓದಿ:ಟಾಲಿವುಡ್ಗೆ ಕಾಲಿಟ್ಟ ಬಿಟೌನ್ ಬೆಡಗಿ; ಎನ್ಟಿಆರ್ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ