ರಾಜ್ಯಾದ್ಯಂತ ಕಾವೇರಿ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಮಾಡಲಾಗಿತ್ತು. ಚಿತ್ರನಟರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ನಟಿ ರಚಿತಾ ರಾಮ್ ಕೂಡ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕುವ ಮೂಲಕ ಕಾವೇರಿ ಹೋರಾಟಕ್ಕೆ ಜೊತೆಯಾಗಿದ್ದಾರೆ.
ಅಕ್ಟೋಬರ್ 3ರಂದು ರಚಿತಾ ರಾಮ್ ಅವರ ಹುಟ್ಟುಹಬ್ಬ. ಪ್ರತಿ ವರ್ಷವೂ ಅವರು ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಅಭಿಮಾನಿಗಳು ಮಧ್ಯರಾತ್ರಿಯೇ ಅವರ ಮನೆ ಮುಂದೆ ಕೇಕ್ ಹಿಡಿದುಕೊಂಡು ಜಮಾಯಿಸುತ್ತಾರೆ. ನಟಿ ಕೇಕ್ ಕತ್ತರಿಸಿ, ಖುಷಿಯಿಂದ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಾರೆ. ಆದರೆ, ಈ ಬಾರಿ ಇಂತಹ ಆಚರಣೆಗೆ ನಟಿ ಒಲ್ಲೆ ಎಂದಿದ್ದಾರೆ. ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿರುವಾಗ ತಾವು ಮಾತ್ರ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಎಂಬುದು ಅವರ ಮಾತು.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಚಿತಾ, "ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ (ಅಕ್ಟೋಬರ್ 3) ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ರೊಮ್ಯಾಂಟಿಕ್ ಮೂಡ್ನಲ್ಲಿ ಸತೀಶ್ ನೀನಾಸಂ-ಡಿಂಪಲ್ ಕ್ವೀನ್: ಮ್ಯಾಟ್ನಿ ಬಿಡುಗಡೆಗೆ ಸಜ್ಜು