ವಿಜಯನಗರ: ಕನ್ನಡ ವಿಶ್ವವಿದ್ಯಾಲಯದ ಪಿಹೆಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ವಿವಿಯಲ್ಲಿ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ನಿಕಾಯಗಳಡಿ ಸಂಶೋಧನೆಗೆ ಆಸಕ್ತಿ ತೋರಿ 981 ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಈ ಪೈಕಿ ಒಟ್ಟು 259 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಕನ್ನಡ ವಿವಿ ಕುಲಸಚಿವ ಡಾ. ಸುಬ್ಬಣ್ಣ ರೈ ಮಾಹಿತಿ ನೀಡಿದ್ದಾರೆ.
ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ. ಪವಿತ್ರಾ ಲೋಕೇಶ್ ಅವರು ಭಾಷಾ ನಿಕಾಯದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ. 30 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿದ ಪವಿತ್ರಾ ಲೋಕೇಶ್ ಸದ್ಯ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಕ್ಷಿಣ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಇವರು ಕಿರುತೆರೆ ಕಾರ್ಯಕ್ರಮಗಳಲ್ಲೂ ನಟಿಸಿದ್ದಾರೆ. 'ಮಿ. ಅಭಿಷೇಕ್' ನಟಿ ಪವಿತ್ರಾ ಲೋಕೇಶ್ ಅವರ ಚೊಚ್ಚಲ ಚಿತ್ರ. ಅಂಬರೀಶ್ ಜೊತೆ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಗಮನ ಸೆಳೆದರು. ನಂತರ 2003 ರಲ್ಲಿ ತೆರೆಕಂಡ ದೊಂಗೊಡು ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ, ಹಲವು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.