ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿ ಸ್ಟಾರ್ ಹಿರೋಯಿನ್ ಆಗಿ ಮೆರೆದ ನಟಿ ಮೀನಾ. ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದರು. ಇವರು ಕಮಲ್ ಹಾಸನ್, ರಜಿನಿಕಾಂತ್, ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ, ರವಿಚಂದ್ರನ್ ಸೇರಿದಂತೆ ಅನೇಕ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ.
ಬಹುಭಾಷಾ ತಾರೆಯಾಗಿ ಮಿಂಚಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ 2009 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರನ್ನು ಮದುವೆಯಾದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ನೈನಿಕಾ ಎಂಬ ಮಗುವೂ ಜನಿಸಿತು. ಆದರೆ ಅವರ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಿತು. ಅವರ ಪತಿ ಕಳೆದ ವರ್ಷ ಜೂನ್ನಲ್ಲಿ ನಿಧನರಾದರು.
ಸದ್ಯ ಮೀನಾ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಆ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಕಳೆದ ತಿಂಗಳು ಚೆನ್ನೈನಲ್ಲಿ ಮೀನಾ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮಿಳು ಚಿತ್ರರಂಗದ ಎಲ್ಲ ತಾರೆಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಬಹುಭಾಷಾ ತಾರೆಯಾಗಿ ಮಿಂಚಿದ ಮೀನಾ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಜನಿಕಾಂತ್, ಬೋನಿ ಕಪೂರ್, ರಾಧಿಕಾ, ರೋಜಾ, ಸಾಂಘವಿ, ಸ್ನೇಹಾ, ಪ್ರಭುದೇವ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಎಲ್ಲರೂ ವೇದಿಕೆಯ ಮೇಲೆ ಮೀನಾ ಜೊತೆಗಿನ ಒಡನಾಟದ ಸುಂದರ ನೆನಪನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನೈನಿಕಾ ತಾಯಿ ಬಗ್ಗೆ ಮಾತನಾಡಿದ ವಿಡಿಯೋವನ್ನು ಮೀನಾಗೆ ಸರ್ಪ್ರೈಸ್ ಆಗಿ ತೋರಿಸಲಾಯಿತು. ಮೀನಾ ಮಗಳು ನೈನಿಕಾ ಮಾತಿಗೆ ರಜನಿಕಾಂತ್ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾವುಕರಾದರು.