ಫೆಬ್ರವರಿ 7ರಂದು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮದುವೆ ಅಗುವವರೆಗೂ ಪ್ರೀತಿ ಬಗ್ಗೆ ಎಲ್ಲೂ ಮಾತನಾಡಿರದ ಈ ನವದಂಪತಿ ನಿನ್ನೆ ಸಂಜೆ ತಮ್ಮ ಈ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಮದುವೆ ಬಗ್ಗೆ ಖಾತ್ರಿಪಡಿಸಿದ್ದಾರೆ. ಈ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗುತ್ತಿದ್ದು, ವಧು ವರರು ಧರಿಸಿದ್ದ ಉಡುಗೆ ಮತ್ತು ಆಭರಣಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಈ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.
ಬಾಲಿವುಡ್ನಲ್ಲೂ ಕಲಿರಗಳ (kaliras / kalire) ಟ್ರೆಂಟ್ ಹೆಚ್ಚುತ್ತಿದೆ. ಕಲಿರ ಎಂದರೆ ವಧು ಧರಿಸುವ ಬಳೆಗಳು, ಆ ಬಳೆಯಲ್ಲಿ ಜುಮ್ಕಿಯನ್ನು ಹೋಲುವ ವಿಶೇಷ ವಿನ್ಯಾಸವಿರುತ್ತದೆ. ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಆಲಿಯಾ ಭಟ್ ಮತ್ತು ಆಥಿಯಾ ಶೆಟ್ಟಿ, ಈಗ ಕಿಯಾರಾ ಅಡ್ವಾಣಿ ಈ ಕಲಿರಗಳನ್ನು ಧರಿಸಿ ಗಮನ ಸೆಳೆದಿದ್ದಾರೆ. ಕಿಯಾರಾ ಅವರು ಸಿದ್ಧಾರ್ಥ್ ಮೇಲಿರುವ ತಮ್ಮ ಪ್ರೇಮವನ್ನು ಈ ಕಲಿರ ಮೂಲಕ ವ್ಯಕ್ತಪಡಿಸಿದ್ದಾರೆ.
ಭಾರತ ಹಲವು ಸಂಸ್ಕೃತಿ, ಆಚರಣೆಗಳಿಂದ ಕೂಡಿದೆ. ಮದುವೆ ಶಾಸ್ತ್ರಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅವು ಆಯಾ ಸಮುದಾಯದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತರದಲ್ಲಿ ಕಲಿರ ಬಳೆ ವಿಶೇಷ ಮಹತ್ವ ಹೊಂದಿದೆ. ವಧು ಧರಿಸುವ ಈ ಕಲಿರ ಪ್ರೀತಿ, ವಿಶ್ವಾಸ, ಸ್ನೇಹ, ಸಂಬಂಧಗಳ ಪ್ರತೀಕ ಎಂದು ಪರಿಗಣಿಸಲಾಗಿದೆ.
ನಟಿ ಕಿಯಾರಾ ಅಡ್ವಾಣಿ ಅವರ ಕಲಿರಗಳನ್ನು ಮೃಣಾಲಿನಿ ಚಂದ್ರ (Mrinalini Chandra) ಅವರು ವಿನ್ಯಾಸಗೊಳಿಸಿದ್ದಾರೆ. ಅವರು NIFT ದೆಹಲಿಯ ಹಳೇ ವಿದ್ಯಾರ್ಥಿಯಾಗಿದ್ದು, ಇಟಲಿಯ ಮಿಲನ್‌ನಲ್ಲಿ ಆಭರಣ ವಿನ್ಯಾಸವನ್ನು ಅಧ್ಯಯನ ಮಾಡಿದ್ದಾರೆ. ಸೆಲೆಬ್ರಿಟಿ ವಧುಗಳಿಗೆ ಕಲಿರ ವಿನ್ಯಾಸಗೊಳಿಸುವ ಮೃಣಾಲಿನಿ ಚಂದ್ರ ಅವರು ಕಿಯಾರಾ ಅವರಿಗೂ ರೊಮ್ಯಾಂಟಿಕ್ ಮತ್ತು ಚಿಂತನಾಶೀಲ ವಿಷಯವನ್ನೊಳಗೊಂಡು ಸುಂದರವಾದ ಕಲಿರ ಮಾಡಿಕೊಟ್ಟಿದ್ದಾರೆ. ಈ ಕಲಿರದಲ್ಲಿ ಚಂದ್ರ, ನಕ್ಷತ್ರ, ಪ್ರವಾಸದ ಸಂಕೇತ, ಪ್ರೀತಿಯ ಸಂಕೇತ, ಸಿದ್ದಾರ್ಥ್ ಅವರ ಮುದ್ದು ಶ್ವಾನ (ಮೃತಪಟ್ಟ ನಾಯಿ)ಕ್ಕೆ ಗೌರವ ಕೊಡುವ ವಿನ್ಯಾಸ ಎಲ್ಲವೂ ಇತ್ತು.