ಸೌತ್ ಸ್ಟಾರ್ ನಟಿ ಕೀರ್ತಿ ಸುರೇಶ್ ಅವರಿಗೆ '2023' ಲಕ್ಕಿ ಇಯರ್ ಎಂದೇ ಹೇಳಬಹುದು. ಏಕೆಂದರೆ ಈ ವರ್ಷ ಇವರು ನಟಿಸಿದ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿವೆ. ಮಾರ್ಚ್ನಲ್ಲಿ ಬಿಡುಗಡೆಯಾದ 'ದಸರಾ' ಮತ್ತು ಜುಲೈನಲ್ಲಿ ತೆರೆ ಕಂಡ 'ನಾಯಕುಡು' ಸೂಪರ್ ಹಿಟ್ ಸಾಲಿಗೆ ಸೇರಿಕೊಂಡಿದೆ. ಇದೇ ಯಶಸ್ಸಿನಲ್ಲಿ ಮುನ್ನಡೆಯಲು ಟಾಲಿವುಡ್ ಬ್ಯೂಟಿ ಸಿದ್ಧರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ತಂಗಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
'ಭೋಲಾ ಶಂಕರ್' ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು, ಮೆಹರ್ ರಮೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿರುಗೆ ನಾಯಕಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಆಗಿ ತಯಾರಾಗುತ್ತಿರುವ ಚಿತ್ರ ಆಗಸ್ಟ್ 11ರಂದು ತೆರೆಗೆ ಅಪ್ಪಳಿಸಲಿದೆ. ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ನಟಿ, 'ಭೋಲಾ ಶಂಕರ್' ಸಿನಿಮಾದ ಕುರಿತು ಹಾಗೂ ಚಿರು ಜೊತೆ ತೆರೆ ಹಂಚಿಕೊಂಡ ಅನುಭವದ ಕುರಿತು ಮಾತನಾಡಿದ್ದಾರೆ.
ಕೀರ್ತಿ ಸುರೇಶ್ ಮಾತು..: "ಸೂಪರ್ಸ್ಟಾರ್ ರಜನಿಕಾಂತ್ ಜೊತೆ 'ಅಣ್ಣತ್ತೆ' (Annaatthe) ಸಿನಿಮಾ ಮಾಡುತ್ತಿದ್ದ ಸಮಯದಲ್ಲೇ 'ಭೋಲಾ ಶಂಕರ್' ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಚಿರಂಜೀವಿ ತಂಗಿಯಾಗಿ ನಟಿಸಲು ಹೇಳಿದಾಗ ತುಂಬಾ ಖುಷಿಯಾಯಿತು. ಆದರೆ ಅವರ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಗುತ್ತೋ, ಇಲ್ಲವೋ ಎಂಬ ಭಯ ನನ್ನಲ್ಲಿತ್ತು. ಆದರೆ ಅದೃಷ್ಟವಶಾತ್ ನಾನು ಅವರ ಜೊತೆ ಎರಡು ಹಾಡುಗಳಿಗೆ ಕುಣಿದಿದ್ದೇನೆ. 'ಭೋಲಾ ಶಂಕರ್' ಅಣ್ಣ ತಂಗಿ ಬಾಂಧವ್ಯದ ಕಥೆ. ಆಕ್ಷನ್, ಕಾಮಿಡಿ ಹೀಗೆ ಸಾಕಷ್ಟು ಕಮರ್ಷಿಯಲ್ ಅಂಶಗಳಿವೆ. ಇದಲ್ಲದೇ ಹಲವು ತಾರೆಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮನ್ನಾ ಮತ್ತು ಚಿರು ನಡುವಿನ ದೃಶ್ಯಗಳು ತುಂಬಾ ಮನರಂಜನೆ ನೀಡುವಂತಿದೆ. ಪ್ರೇಕ್ಷಕರನ್ನು ನಗಿಸಲಿದೆ" ಎಂದು ಹೇಳಿದರು.