ಸಿನಿಮಾ ಜೊತೆಗೆ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಪಂಜಾಬ್‌ನ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಲಿವುಡ್ ನಟಿ ಪ್ರತಿಕ್ರಿಯಿಸಿದ್ದಾರೆ.
ಕಂಗನಾ ರಣಾವತ್ ಟ್ವೀಟ್: ಟ್ವಿಟರ್ನಲ್ಲಿ ಪಂಜಾಬ್ ಅನ್ನು ಗುರಿಯಾಗಿಸಿಕೊಂಡ ನಟಿ ಕಂಗನಾ ರಣಾವತ್, ಪಂಜಾಬ್‌ನಲ್ಲಿ ಜರುಗುತ್ತಿರುವ ವಿಷಯಗಳ ಬಗ್ಗೆ ನಾನು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ, ನನ್ನ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ, ನನ್ನ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ, ಪಂಜಾಬ್‌ನಲ್ಲಿ ನನ್ನ ಕಾರಿನ ಮೇಲೆ ದಾಳಿ ಮಾಡಲಾಗಿದೆ, ಆದ್ರೆ ನಾನು ನುಡಿದ ಭವಿಷ್ಯ ಸದ್ಯ ಪಂಜಾಬ್‌ನಲ್ಲಿ ಜರುಗುತ್ತಿದೆ, ಖಲಿಸ್ತಾನೇತರ ಸಿಖ್ಖರು ತಮ್ಮ ಸ್ಥಾನ ಮತ್ತು ಉದ್ದೇಶವನ್ನು ಸ್ಪಷ್ಟಪಡಿಸಬೇಕಾದ ಸಮಯ ಇದು ಎಂದು ಬರೆದುಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ ಟ್ವೀಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಹು ಬೇಗನೆ ವ್ಯಕ್ತವಾಗಿವೆ. ಇದರಲ್ಲಿ ಹಾಸ್ಯಾಸ್ಪದ ರಿಯಾಕ್ಷನ್ಸ್ ಕೂಡ ಇದೆ. ಪಂಜಾಬಿ ಗಾಯಕ, ನಟ ದಿಲ್ಜಿತ್ ದೋಸಾಂಜ್ ಅವರ ಅಭಿಮಾನಿಗಳು "ಈ ಆಂಟಿ ದಿಲ್ಜಿತ್ ದೋಸಾಂಜ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ'' ಎಂದು ಹೇಳಿದ್ದಾರೆ. ಮತ್ತೋರ್ವ ಬಳಕೆದಾರರು, ಮೇಡಂ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಪಂದ್ಯದ ವಿಜೇತರನ್ನು ಊಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಅಜ್ನಾಲಾ ಪೊಲೀಸ್ ಠಾಣೆ ಘಟನೆ: ಫೆಬ್ರವರಿ 23ರಂದು, ಖಲಿಸ್ತಾನ್ ಬೆಂಬಲಿಗರು ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ಅಮೃತಸರ ಜಿಲ್ಲೆಯ ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಬೆಂಬಲಿಗರು ದಾಳಿ ನಡೆಸಿದ್ದು, ಅವರು ಕೂಡ ಸ್ಥಳದಲ್ಲಿದ್ದರು. ಅಮೃತಪಾಲ್ ಅವರ ಸಹೋದ್ಯೋಗಿ ಲವ್ಪ್ರೀತ್ ಸಿಂಗ್ ತೂಫಾನ್ ಬಿಡುಗಡೆಗೆ ಒತ್ತಾಯಿಸಿ ಜನರು ಪೊಲೀಸ್ ಠಾಣೆಗೆ ಬಂದಿದ್ದರು. ಆ ವೇಳೆ, ಪೊಲೀಸರು ಆ ಪ್ರದೇಶವನ್ನು ಬ್ಯಾರಿಕೇಡ್ ಹಾಕುವ ಮೂಲಕ ತಡೆದಿದ್ದರು. ಆದಾಗ್ಯೂ, ಅಮೃತ್ಪಾಲ್ ಸಿಂಗ್ ಶಸ್ತ್ರಾಸ್ತ್ರಗಳೊಂದಿಗೆ ಅಲ್ಲಿಗೆ ತಲುಪಿದ್ದನ್ನು ಕಂಡ ಪೊಲೀಸರು ಹಿಂದೆ ಸರಿದರು. ಇದರ ಲಾಭ ಪಡೆದ ಖಲಿಸ್ತಾನ್ ಬೆಂಬಲಿಗರು ಪೊಲೀಸ್ ಸಿಬ್ಬಂದಿಗೆ ಥಳಿಸಿ ಠಾಣೆಗೆ ನುಗ್ಗಿದ್ದರು.