ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯಕರ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿಯ ನಡವಳಿಕೆಗೆ, ಫ್ಯಾನ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ಬ್ರೇಕ್: ಇನ್‌ಸ್ಟಾಗ್ರಾಮ್‌ನಲ್ಲಿ 14.4 ಮಿಲಿಯನ್ ಫಾಲೋವರ್ಗಳನ್ನು ಸಂಪಾದಿಸಿರುವ ಬಾಲಿವುಡ್ ಬೆಡಗಿ ಕಾಜೋಲ್ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಲು ಇಚ್ಛಿಸಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಘೋಷಿಸಿರುವ ಪೋಸ್ಟ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಹಾಕಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಮಾಧ್ಯಮದ ಒಂದು ವಿಭಾಗವು ಅವರ ಮುಂಬರುವ ಸರಣಿಯನ್ನು ಪ್ರಚಾರ ಮಾಡುವ ಗಿಮಿಕ್ ಎಂದು ಹೇಳುತ್ತಿದ್ದಾರೆ.
ರಹಸ್ಯಕರ ಪೋಸ್ಟ್: ಈ ಬ್ರೇಕ್ ಘೋಷಣೆಯು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಏಕೆಂದರೆ ಪ್ರತಿಭಾವಂತ ನಟಿ ಜೀವನದಲ್ಲಿ ಕಠಿಣ ಸಮಯ ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ. "ನನ್ನ ಜೀವನದ ಕಠಿಣ ಪರೀಕ್ಷೆ ಒಂದನ್ನು ಎದುರಿಸುತ್ತಿದ್ದೇನೆ" ಎಂಬ ರಹಸ್ಯಕರ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಾಜೋಲ್, "ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ" ಎಂದು ಕ್ಯಾಪ್ಷನ್ನಲ್ಲಿ ಬರೆದಿದ್ದಾರೆ.
ಕಾಜೋಲ್ ಸಾಮಾಜಿಕ ಮಾಧ್ಯಮದಿಂದ ವಿರಾಮವನ್ನು ಘೋಷಿಸಿದ ಕೂಡಲೇ ಅಭಿಮಾನಿಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಅಭಿಮಾನಿಯೋರ್ವರು ಕಾಮೆಂಟ್ ಮಾಡಿ "ದಯವಿಟ್ಟು ಕಾಳಜಿ ವಹಿಸಿ" ಎಂದು ತಿಳಿಸಿದ್ದಾರೆ. ಮತ್ತೋರ್ವ ಅಭಿಮಾನಿ ಜೀವನದಲ್ಲಿ ಏನಾದರು ಅಡೆತಡೆಗಳು ಇದ್ದಲ್ಲಿ ಹೋರಾಡಲು ಈ ವರ್ಚುಯಲ್ ವೇದಿಕೆಯಲ್ಲಿ "ಪ್ರೀತಿ ಮತ್ತು ಶಕ್ತಿ" ಅನ್ನು ಕಳುಹಿಸಿದರು.