ಮುಂಬೈ (ಮಹಾರಾಷ್ಟ್ರ): ನಟಿ ಜಿಯಾ ಖಾನ್ (Jiah Khan) ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ನಟ ಸೂರಜ್ ಪಾಂಚೋಲಿ ಇಂದು ಬೆಳಗ್ಗೆ ತಮ್ಮ ನಿವಾಸದಿಂದ ಮುಂಬೈನ ಸಿಬಿಐ ಕೋರ್ಟ್‌ಗೆ ತೆರಳಿದ್ದಾರೆ. ಜಿಯಾ ಖಾನ್ ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸುಮಾರು 10 ವರ್ಷಗಳ ನಂತರ, ವಿಶೇಷ ಸಿಬಿಐ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ. ಬಹು ಚರ್ಚಿತ ಸಂವೇದನಾಶೀಲ ಪ್ರಕರಣದಲ್ಲಿ ಬಾಲಿವುಡ್ ನಟ ಸೂರಜ್ ಪಾಂಚೋಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದಾರೆ.
2013ರ ಜೂನ್ 3ರಂದು ತಮ್ಮ ಮನೆಯಲ್ಲಿ ನಟಿ ಜಿಯಾ ಖಾನ್ ಶವವಾಗಿ ಪತ್ತೆಯಾಗಿದ್ದರು. ಅವರ ಆತ್ಮಹತ್ಯೆ ಪ್ರಕರಣದ ತೀರ್ಪನ್ನು ಮುಂಬೈನ ಸಿಬಿಐ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಬಾಲಿವುಡ್‌ನ ಜಿಯಾ ಖಾನ್ ತಮ್ಮ ಜೀವನವನ್ನು ಕೊನೆಗೊಳಿಸಿದ ಒಂದು ವಾರದ ನಂತರ, ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸೂರಜ್ ಅವರ ಮೇಲೆ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಿಸಲಾಯಿತು. ಜಿಯಾ ಅವರ ತಾಯಿ ರಬಿಯಾ ಖಾನ್ ಅವರ ಮನವಿ ನಂತರ ಬಾಂಬೆ ಹೈಕೋರ್ಟ್‌ನ ನಿರ್ದೇಶನ ಮೇರೆಗೆ 2014ರ ಜುಲೈ 3ರಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.
ಅಮೆರಿಕ ಮೂಲದ ನಟಿ ಜಿಯಾ ಖಾನ್ ತಮ್ಮ 25ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದು ಬಾಲಿವುಡ್ಗೆ ಆಘಾತ ನೀಡಿತ್ತು. 2013ರ ಜೂನ್ 3ರಂದು ಮಧ್ಯರಾತ್ರಿಯ ಸಮಯದಲ್ಲಿ ಐಷಾರಾಮಿ ಜುಹು ಪ್ರದೇಶದ ಸಾಗರ್ ಸಂಗೀತ್ ಬಿಲ್ಡಿಂಗ್‌ನಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹಿರಿಯ ತಾರಾ ದಂಪತಿಗಳಾದ ಆದಿತ್ಯ ಪಾಂಚೋಲಿ ಮತ್ತು ಝರೀನಾ ವಹಾಬ್ ಅವರ ಪುತ್ರ ಸೂರಜ್ ಪಾಂಚೋಲಿ ಅವರೊಂದಿಗೆ ಜಿಯಾ ಖಾನ್ ಸಂಬಂಧದಲ್ಲಿದ್ದರು ಎಂದು ಹೇಳಲಾಗಿದೆ. ಆ ಸಮಯದಲ್ಲಿ ಬಾಲಿವುಡ್‌ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ಸೂರಜ್ ಪಾಂಚೋಲಿ ಮೇಲೆ ಸಂಶಯ ಮೂಡುವಂತಹ ಬರಹವನ್ನು ಜಿಯಾ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆ ನಟ ಸೂರಜ್ ಪಾಂಚೋಲಿ ಪ್ರಕರಣದ ಆರೋಪಿಯಾಗಿ ಗುರುತಿಸಿಕೊಂಡಿದ್ದಾರೆ.