ನಟಿ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಪ್ರೇಮಿಗಳೆಂಬ ವದಂತಿ ಕೆಲ ಸಮಯದಿಂದಲೂ ಇದೆ. ನಿಜವಾಗಿಯೂ ಪ್ರೇಮಿಗಳೇ ಅಥವಾ ಸ್ನೇಹಿತರೇ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಅಲ್ಲದೇ ಈ ಜೋಡಿ ಮಧ್ಯೆ ಅಂತರವಿದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವದಂತಿಯ ಪ್ರೇಮ ಪಕ್ಷಿಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಜೊತೆಯಾಗಿ ವಿದೇಶ ಪ್ರಯಾಣವನ್ನೂ ಮಾಡಿದ್ದರು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ನಟಿ ಜಾನ್ವಿ ತಮ್ಮ ವದಂತಿ ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇವರಿಬ್ಬರೂ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಾನ್ವಿ ಕಪೂರ್ ಪಿಂಕ್ ಮತ್ತು ಗ್ರೀನ್ ಕಲರ್ ಲಂಗ ದಾವಣಿ ತೊಟ್ಟು ಟ್ರೆಡಿಷನಲ್ ಆಗಿ ದೇವಸ್ಥಾನಕ್ಕೆ ಬಂದಿದ್ದರು. ಜೊತೆಗೆ ಶಿಖರ್ ಪಹಾರಿಯಾ ಬಿಳಿ ಧೋತಿ ಮತ್ತು ರೇಷ್ಮೆ ಶಾಲು ಧರಿಸಿದ್ದರು. ಇವರಿಬ್ಬರ ಜೊತೆ ಜಾನ್ವಿ ಸಹೋದರಿ ಖುಷಿ ಕೂಡ ಇದ್ದರು. ಈ ಸೆಲೆಬ್ರಿಟಿಗಳಿಗೆಂದೇ ದೇವಸ್ಥಾನದಲ್ಲಿ ದರ್ಶನ ಪಡೆಯಲು ವಿಶೇಷ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಇಂದು ಶಿಖರ್ ಜನ್ಮದಿನ:ಇಂದು ಶಿಖರ್ ಪಹಾರಿಯಾ ಅವರ ಹುಟ್ಟುಹಬ್ಬ. ಗೆಳತಿ ಜಾನ್ವಿ, ವದಂತಿ ಗೆಳೆಯ ಶಿಖರ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿಕೊಂಡು ವಿಶ್ ಮಾಡಿದ್ದಾರೆ. 'ಹ್ಯಾಪಿ ಬರ್ತ್ಡೇ ಶಿಖು' ಎಂದು ಬರೆದು ರೆಡ್ ಎಮೋಜಿನೊಂದಿಗೆ ಶಿಖರ್ ಕೈ ಹಿಡಿದಿರುವ ಫೋಟೋವನ್ನು ಶೇರ್ ಮಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ಖುಷಿ ಕಪೂರ್ ಕೂಡ ಶಿಖರ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ.