ನವದೆಹಲಿ:200 ಕೋಟಿ ರೂಪಾಯಿ ವಂಚನೆ ಪ್ರಕರಣ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಗುರುತಿಸಿಕೊಂಡು ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ದೋಷಿ ಎಂದು ಹೇಳಲಾದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಇಡಿ ತನ್ನನ್ನು ದೋಷಿ ಎಂದು ಗುರುತಿಸಿದೆ. ಸುಕೇಶ್ ಚಂದ್ರಶೇಖರ್ ಅವರಿಂದ ಹಣ ಪಡೆದು ಅದನ್ನು ಎಫ್ಡಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದು ಸುಳ್ಳು. ಅವರಿಂದ ನಾನು ಹಣ ಪಡೆದಿಲ್ಲ. ಅದೆಲ್ಲವೂ ನನ್ನ ಕಷ್ಟಾರ್ಜಿತ ದುಡ್ಡಾಗಿದೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದಲ್ಲಿ ಇಡಿ ಕೇಳಿದ ಸ್ಪಷ್ಟನೆಗೆ ಉತ್ತರ ನೀಡಿರುವ ನಟಿ ಜಾಕ್ವೆಲಿನ್, ಸುಕೇಶ್ ಚಂದ್ರಶೇಖರ್ ಅವರ ಜೊತೆ ಸಂಪರ್ಕ ಬೆಳೆಸಿಕೊಳ್ಳುವ ಮೊದಲು ನಾನು ಆ ಹಣವನ್ನು ಎಫ್ಡಿ ಮಾಡಿಸಿದ್ದೇನೆ. ಅದು ಕಾನೂನುಬದ್ಧವಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ನಾನು ತೆರಿಗೆಯನ್ನೂ ಪಾವತಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.