ಜೈಪುರ:ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆಗೆ ಭಾರಿ ಸಿದ್ಧತೆ ನಡೆದಿದೆ. ಉದ್ಯಮಿ ಸೊಹೇಲ್ ಕಥರಿಯಾ ಜೊತೆ ಹಸೆಮಣೆ ಏರಲಿದ್ದು ಮೆಹಂದಿ ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ನಡೆದಿವೆ. 450 ವರ್ಷಗಳಷ್ಟು ಹಳೆಯದಾದ ಜೈಪುರದ ಪುರಾತನ ಮಂಡೋಟಾ ಅರಮನೆ ಅವರ ಮದುವೆಗೆ ಸಾಕ್ಷಿಯಾಗುಲಿದ್ದು ಸದ್ಯ ಲೈಟಿಂಗ್ಸ್ನಿಂದ ಸಿಂಗಾರಗಳಿಸಲಾಗಿದೆ. ಕೆಂಪು ಡ್ರೆಸ್ ಧರಿಸಿದ್ದ ಅವರು ಸೋಫಾದ ಮೇಲೆ ಕುಳಿತು ಮೆಹಂದಿ ಹಚ್ಚಿಕೊಳ್ಳುತ್ತಿರುವ ಫೋಟೋ ಜಾಲತಾಣದಲ್ಲಿ ಜಾಗ ಪಡೆದಿದೆ. ಈ ವೇಳೆ, ಅವರು ಚಿತ್ರವೊಂದರ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಹಾಡಿನಲ್ಲಿ ಭಾವಿ ಪತಿ ಸೊಹೈಲ್ ಕೂಡ ಇದ್ದಾರೆ.
ಸೊಹೈಲ್ ಪೀಚ್ ಬಣ್ಣದ ಪಠಾನಿ ಸೂಟ್ ಧರಿಸಿದ್ದರು. ಹಸೆಮಣೆ ಏರುವ ಮುನ್ನ ಈ ಸುಂದರ ಘಳಿಗೆ ಕಂಡು ಇಬ್ಬರು ಮುಗುಳು ನಗೆ ಬೀರಿದರು. ನವೆಂಬರ್ 20 ರಂದೇ ಮುಂಡೋಟಾ ಅರಮನೆಗೆ ಬಂದಿರುವ ಈ ತಾರಾ ಜೋಡಿ ಇಲ್ಲಿಯವರೆಗೆ ಬಗೆ ಬಗೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಊಟ - ಉಪಚಾರದಿಂದ ಹಿಡಿದು ಫೋಟೋಶೂಟ್ ವರೆಗೂ ಹನ್ಸಿಕಾ ಅಪ್ಡೇಟ್ ಮಾಡುತ್ತಲೇ ಬಂದಿದ್ದಾರೆ. ಇಂದು (ಡಿಸೆಂಬರ್ 2) ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದ್ದು ಡಿಸೆಂಬರ್ 3ರಿಂದ ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯಲಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಸೊಹೇಲ್.
ಐಷಾರಾಮಿ ಹೋಟೆಲ್ ಆದ ಯುದ್ಧದ ಕೋಟೆ: ಮುಂಡೋಟಾ ಕೋಟೆಯು ಈ ಮೊದಲು ಯುದ್ಧದ ಕೋಟೆಯಾಗಿದ್ದು, ಇದೀಗ ಐಷಾರಾಮಿ ಹೋಟೆಲ್ ಆಗಿ ಕಂಗೊಳಿಸುತ್ತಿದೆ. ಈ ಅರಮನೆಯನ್ನು ಇತ್ತೀಚೆಗೆ ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಒಂದು ಭಾಗವು ಸೂಟ್ ಮತ್ತು ಒಂದು ಭಾಗವು ಯುದ್ಧದ ಕೋಟೆಯಾಗಿದೆ. ಈ ಕೋಟೆಯಲ್ಲಿ ಸುಮಾರು ನಾಲ್ಕೂವರೆ ನೂರು ವರ್ಷಗಳ ಹಿಂದೆ ನರುಕ ರಜಪೂತ ರಾಜರು ನೆಲೆಸಿದ್ದರು ಎಂದು ಹೇಳಲಾಗುತ್ತದೆ.