ಆರ್ಆರ್ಆರ್ ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಿರ್ದೇಶಕ ರಾಜಮೌಳಿ ಅವರು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ನ ಮಸ್ತಾನಿ ದೀಪಿಕಾ ಪಡುಕೋಣೆ ಅವರು ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಚಿತ್ರದ ಕಥೆಯನ್ನು ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಬರೆದಿದ್ದು, ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ. 'SSMB29' ಚಿತ್ರದ ತಾತ್ಕಾಲಿಕ ಶೀರ್ಷಿಕೆ. 2023ರಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಟಿ ದೀಪಿಕಾ ಪಡುಕೋಣೆ ಮತ್ತು ಮಹೇಶ್ ಬಾಬು ಒಟ್ಟಿಗೆ ಕೆಲಸ ಮಾಡುವುದು ಇದೇ ಮೊದಲು.
ದೀಪಿಕಾ ಪ್ರಸ್ತುತ 'ಪ್ರಾಜೆಕ್ಟ್ ಕೆ' ಎಂಬ ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಅವರು ನಟ ಪ್ರಭಾಸ್, ಅಮಿತಾಭ್ ಬಚ್ಚನ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಕೋವಿಡ್ ಹಿನ್ನೆಲೆ ಒಂದು ವರ್ಷ ತಡವಾಗಿ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ವಿಶ್ವದ 9ನೇ ಸುಂದರಿ
ಈ ಹಿಂದೆ 'ಪ್ರಾಜೆಕ್ಟ್ ಕೆ' ಸೆಟ್‌ನಲ್ಲಿ ದೀಪಿಕಾ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟಿ ಚೇತರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಮರಳಿದರು. ಇನ್ನು, ಪ್ರಭಾಸ್ ತಮ್ಮ ಮುಂಬರುವ ಪೌರಾಣಿಕ ಚಿತ್ರ 'ಆದಿಪುರುಷ್' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರಲ್ಲಿ ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಕೂಡ ನಟಿಸಿದ್ದಾರೆ.