ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಬಾಲಿವುಡ್ನ ಜನಪ್ರಿಯ ತಾರಾ ದಂಪತಿ. ಕಳೆದ ನವೆಂಬರ್ ಈ ಸೆಲೆಬ್ರಿಟಿ ಕಪಲ್ ಪೋಷಕರಾಗಿ ಭಡ್ತಿ ಪಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇದೀಗ ನಟಿ ತಾಯ್ತನ ಮತ್ತು ತಾವು ಎದುರಿಸಿದ ಸವಾಲುಗಳ ಬಗ್ಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ಹೌದು, ಇತ್ತೀಚೆಗೆ ನಟಿ ಬಿಪಾಶಾ ಬಸು ಇನ್ಸ್ಟಾಗ್ರಾಮ್ ಲೈವ್ನಲ್ಲಿ ನಟಿ ನೇಹಾ ಧೂಪಿಯಾ ಅವರೊಂದಿಗಿನ ಸಂಭಾಷಣೆಯ ಸಂದರ್ಭ ತಾಯ್ತನದ ಭಾವನಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ವಿಚಾರ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಪುತ್ರಿ ದೇವಿ ಸಿಂಗ್ ಗ್ರೋವರ್ ಕುರಿತಾಗಿತ್ತು. ಪುತ್ರಿ ಜನಿಸಿದ ನಂತರ ಆಕೆಯ ಆರೋಗ್ಯ ಚೇತರಿಕೆಗೆ ದೊಡ್ಡ ಹೋರಾಟ ನಡೆಸಿದ್ದೇವೆಂಬುದನ್ನು ಬಹಿರಂಗಪಡಿಸಿದರು.
ದೇವಿ ಸಿಂಗ್ ಗ್ರೋವರ್ 2022ರ ನವೆಂಬರ್ 12ರಂದು ಜನಿಸಿದಳು. ಇದು ಕರಣ್ ಬಿಪಾಶಾ ದಂಪತಿಗೆ ಅತ್ಯಂತ ಸಂತೋಷಕರ ಕ್ಷಣವಾಗಿತ್ತು. ಆದ್ರೆ ಮಗು (ventricular septal defect - VSD) ಅನಾರೋಗ್ಯದಿಂದ ಬಳಲುತ್ತಿದೆ ಎಂಬುದನ್ನು ಪೋಷಕರು, ವೈದ್ಯರ ತಂಡ ಕಂಡುಕೊಂಡಿತು. ಮಗುವಿನ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂಬುದನ್ನು ಅರಿತ ಸ್ಟಾರ್ ದಂಪತಿ ಆಘಾತಕ್ಕೊಳಗಾದರು. ಈ ವಿಚಾರವನ್ನು ಖಾಸಗಿಯಾಗೇ ಇರಿಸಿಕೊಂಡರು. ಮಗುವಿನ ಪರಿಸ್ಥಿತಿ ಪೋಷಕರಿಗೆ ದೊಡ್ಡ ಹೋರಾಟವೇ ಆಗಿತ್ತು.
ಇನ್ಸ್ಟಾಗ್ರಾಮ್ ಸಂಭಾಷಣೆಯಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ತಮ್ಮ ಭಾವನಾತ್ಮಕ ಮತ್ತು ಸವಾಲಿನ ಪ್ರಯಾಣವನ್ನು ಬಿಚ್ಚಿಟ್ಟರು. ಆ ಸಂದರ್ಭ ಮಗುವಿನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪೂರ್ಣ ಪ್ರಮಾಣದ ಶ್ರಮ ವಹಿಸಿದರು. ಆ ಕಠಿಣ ಸಂದರ್ಭ ತಮಗೆ ಸಹಾಯ ಮಾಡಿದ ಎಲ್ಲಾ ತಾಯಂದಿರಿಗೆ ನಟಿ ಕೃತಜ್ಞತೆ ಅರ್ಪಿಸಿದ್ದಾರೆ. ಜೊತೆಗೆ ಇದೊಂದು ಸವಾಲಿನ ಅನುಭವವಾಗಿದ್ದು, ಯಾವುದೇ ಪೋಷಕರಿಗೂ ಈ ಪರಿಸ್ಥಿತಿ ಬರಬಾರದೆಂದು ತಿಳಿಸಿದ್ದಾರೆ.
ದೇವಿ ಜನಿಸಿದ ಮೊದಲ ಐದು ತಿಂಗಳು ಪೋಷಕರಿಗೆ ಸವಾಲಿನ ಸಂದರ್ಭವಾಗಿತ್ತು. ಬಹಳ ಆತಂಕದ ದಿನಗಳನ್ನು ದೂಡಿದರು. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡುವಂತೆ ವೈದ್ಯರು ಸೂಚಿಸಿದ್ದರು. ಈ ಸಮಸ್ಯೆ ಸ್ವಾಭಾವಿಕವಾಗಿ ಗುಣವಾಗುತ್ತದೆ ಎಂದು ನಂಬಲಾಗಿತ್ತು. ಮಗುವಿನ ಹೃದಯದಲ್ಲಿನ ರಂಧ್ರಗಳು ದೊಡ್ಡದಾಗಿದ್ದ ಹಿನ್ನೆಲೆ, ಇದು ಸ್ವಯಂಪ್ರೇರಿತವಾಗಿ ಗುಣವಾಗುವ ಸಾಧ್ಯತೆ ಕಡಿಮೆ. ಹಾಗಾಗಿ, ಮಗುವಿನ ಆರೋಗ್ಯ ರಕ್ಷಣೆ ವಿಚಾರದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತು. ದಿನಗಳು ಉರುಳಿದರೂ ಚೇತರಿಕೆ ಕಾಣದ ಹಿನ್ನೆಲೆ, ತಾರಾ ದಂಪತಿ ಮಗುವಿನ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಬೇಕಾಯಿತು.
ಮೂರು ತಿಂಗಳ ಮಗು ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಬೇಕಾದ ಪರಿಸ್ಥಿತಿ ಪೋಷಕರಿಗೆ ನುಂಗಲಾಗದ ತುತ್ತಾಯಿತು. ನೈಸರ್ಗಿಕವಾಗಿ ಚೇತರಿಕೆ ಕಾಣಲು ಬಯಸಿದ್ದರೂ ಕೂಡ ಅಂತಿಮವಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬುದನ್ನು ಅರಿತರು. ಮಗಳ ಆರೋಗ್ಯ ರಕ್ಷಣೆಗೆ ಸರ್ಜರಿ ಅನಿವಾರ್ಯವಾಯಿತು.
ಉತ್ತಮ ನಿರ್ಧಾರ ಕೈಗೊಳ್ಳಲು ದಂಪತಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರು. ಶಸ್ತ್ರಚಿಕಿತ್ಸಕರೊಂದಿಗೆ ಸಮಾಲೋಚನೆ ನಡೆಸಿದರು. ಈ ನಿರ್ಧಾರ ಕೈಗೊಳ್ಳಲು ವ್ಯಾಪಕ ಸಂಶೋಧನೆ ನಡೆಸಿದರು. ಚಿಕಿತ್ಸೆ ಕೊಡಿಸಲು ಬಿಪಾಶಾ ಸಿದ್ಧರಾದದರೂ ಕೂಡ ಕರಣ್ ಅವರಿಗೆ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರು ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆ ನಡೆಯಿತು. ಮಗು ಆಪರೇಷನ್ ಥಿಯೇಟರ್ನಲ್ಲಿದ್ದ ಸಂದರ್ಭ ನಟಿ ತಮ್ಮ ಜೀವವೇ ಸ್ಥಗಿತವಾಗಿತ್ತು ಎಂದು ಭಾವಿಸಿದರು.
ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ ಡಿಕ್ರೂಜ್: ಹುಟ್ಟಿದ ತಕ್ಷಣ ನಾಮಕರಣ.. ಕಂದಮ್ಮನ ಫೋಟೋ ನೋಡಿ..
ಅಂತಿಮವಾಗಿ ಮಗುವಿನ ಹಾರ್ಟ್ ಸರ್ಜರಿ ಯಶಸ್ವಿಯಾಗಿದೆ ಎಂಬ ಸುಖ ಸುದ್ದಿ ಬಂತು. ಪೋಷಕರು ಆತಂಕದಿಂದ ಹೊರಬಂದರು. ಮಗಳ ಆರೋಗ್ಯ ಕ್ರಮೇಣ ಸುಧಾರಿಸಿತು. ಈ ಕಠಿಣ ಸಂದರ್ಭದಲ್ಲಿ ಮಗಳ ಆರೈಕೆ ಮಾಡಿದ ವೈದ್ಯರ ತಂಡಕ್ಕೆ ನಟಿ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ದೇವಿ ಆರೋಗ್ಯ ಚೇತರಿಕೆಯ ಹಂತದಲ್ಲಿದೆ. ಈ ವಿಚಾರವನ್ನು ಹಂಚಿಕೊಂಡಿರುವ ಬಿಪಾಶಾ, ಹೊರಗೆ ಇದೇ ರೀತಿಯ ಸವಾಲನ್ನು ಎದುರಿಸುತ್ತಿರುವ ಪೋಷಕರಿಗೆ ಶಕ್ತಿ ನೀಡಬಹುದು ಎಂದು ನಂಬಿದ್ದಾರೆ.