ಹಿಂದಿ ಬಿಗ್ ಬಾಸ್ 16ರ ಮೂಲಕ ಜನಪ್ರಿಯರಾದ ನಟಿ, ಮಾಡೆಲ್ ಅರ್ಚನಾ ಗೌತಮ್ ಹಾಗೂ ಅವರ ತಂದೆ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿಯ ಹೊರಗೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಯ ತಂದೆ ಮಾತನಾಡಿ, ಮಗಳ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ದೆಹಲಿಯ ಕಾಂಗ್ರೆಸ್ ಕಚೇರಿ ಬಳಿ ನಟಿ ಅರ್ಚನಾ ಗೌತಮ್ ಮತ್ತು ಅವರ ತಂದೆ ಕಾಣಿಸಿಕೊಂಡಿದ್ದರು. ಅಲ್ಲಿ ನಡೆದಿದೆ ಎನ್ನಲಾದ ಗಲಾಟೆಯ ವಿಡಿಯೋ ವೈರಲ್ ಆಗಿದೆ. ಮಹಿಳಾ ಮೀಸಲಾತಿ ವಿಚಾರವಾಗಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲು ತಮ್ಮ ಮಗಳು ಅಲ್ಲಿಗೆ ಭೇಟಿ ಕೊಟ್ಟಿದ್ದರು. ನಾನೂ ಜೊತೆಗಿದ್ದೆ. ಆದರೆ ಮಗಳು ಭೇಟಿ ಕೊಡುವ ಮುನ್ನವೇ ಕೆಲವರು ಅಲ್ಲಿಗೆ ಬಂದು ನಿಂತಿದ್ದರು. ಮಗಳನ್ನು ನೋಡಿದ ತಕ್ಷಣ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೂ ಹಲ್ಲೆ ನಡೆದಿದೆ ಎಂದು ನಟಿಯ ತಂದೆ ಆರೋಪಿಸಿದ್ದಾರೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಅರ್ಚನಾ ಗೌತಮ್ ಅವರ ತಂದೆ ಗೌತಮ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಮಗಳು ಸಮಯ ತೆಗೆದುಕೊಂಡಿದ್ದಳು. ಅರ್ಚನಾ ಜೊತೆ ನಾನೂ ಕಾಂಗ್ರೆಸ್ ಕಚೇರಿ ತಲುಪಿದ್ದೆ. ಮಗಳು ಕಾರಿನಿಂದ ಇಳಿಯುತ್ತಿದ್ದಂತೆ, ಕೆಲ ಯುವಕರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮೈಮೇಲೆ ಕೈ ಹಾಕಿದರು, ಬಟ್ಟೆಗಳನ್ನು ಎಳೆದರು, ಥಳಿಸಿದರು ಎಂದು ನಟಿಯ ತಂದೆ ಆರೋಪಿಸಿದ್ದಾರೆ.