ಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ದಾಖಲಾಗಿರುವ ಚೆಕ್ ಬೌನ್ಸ್ ಮತ್ತು ವಂಚನೆ ಆರೋಪ ಪ್ರಕರಣ ಸಂಬಂಧ ವಿಚಾರಣೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸಾಕ್ಷಿ ವಿಚಾರಣೆ (cross-examination of witnesses) ಯಲ್ಲಿ ತಮ್ಮ ಸಾಕ್ಷಿ ಪ್ರಸ್ತುತಪಡಿಸದ ಹಿನ್ನೆಲೆಯಲ್ಲಿ ರಾಂಚಿ ನ್ಯಾಯಾಲಯ ಇಂದು ಅವರಿಗೆ 500 ರೂಪಾಯಿ ದಂಡ ವಿಧಿಸಿದೆ.
ನಟಿ ಅಮೀಶಾ ಪಟೇಲ್ ವಿರುದ್ಧ 2018 ರಲ್ಲಿ ಚೆಕ್ ಬೌನ್ಸ್ ಮತ್ತು ವಂಚನೆ ಆರೋಪ ಪ್ರಕರಣ ದಾಖಲಾಗಿದೆ. ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ನಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ, ಅರ್ಜಿದಾರ - ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಪರವಾಗಿ, ಅವರ ಕಂಪನಿಯ ಮ್ಯಾನೇಜರ್ ರಾಂಚಿಯ ಮ್ಯಾಜಿಸ್ಟ್ರೇಟ್ ಡಿಎನ್ ಶುಕ್ಲಾ ಅವರಿದ್ದ ನ್ಯಾಯಾಲಯದಲ್ಲಿ ತಮ್ಮ ಮೊದಲ ಸಾಕ್ಷ್ಯವನ್ನು ನೀಡಿದರು.
''ಈ ಹಿಂದೆ ನಟಿಯ ಆಪ್ತರೊಂದಿಗೆ ಹರ್ಮು ಮೈದಾನದಲ್ಲಿ ಅಜಯ್ ಕುಮಾರ್ ಸಿಂಗ್ ಅವರ ಚಿತ್ರಕ್ಕೆ ಹಣ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆ ನಂತರ, ನಟಿ ನಿರ್ಮಾಪಕ ಅಜಯ್ ಸಿಂಗ್ ಅವರೊಂದಿಗೆ ರಾಂಚಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಮೀಟಿಂಗ್ ನಡೆಸಿದರು. ಆ ವೇಳೆ 'ದೇಸಿ ಮ್ಯಾಜಿಕ್' ಚಿತ್ರದ ಬಗ್ಗೆ ಚರ್ಚೆ ನಡೆಯಿತು. ಸಿನಿಮಾ ನಿರ್ಮಾಣಕ್ಕೆ ಅಜಯ್ ಕುಮಾರ್ ಸಿಂಗ್ ಹಣ ಹೂಡಿದರೆ ಬರುವ ಲಾಭದಲ್ಲಿ ಪಾಲು ಸಿಗುತ್ತದೆ ಎಂದು ನಿರ್ಧರಿಸಲಾಗಿತ್ತು'' ಎಂದು ಅಜಯ್ ಕುಮಾರ್ ಸಿಂಗ್ ಕಂಪನಿಯ ಮ್ಯಾನೇಜರ್ ತಿಳಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿರುವ ಅಜಯ್ ಕುಮಾರ್ ಸಿಂಗ್ ಪರ ವಕೀಲರು, ''ಅಜಯ್ ಅವರು ಅಮೀಶಾ ಅವರ ಖಾತೆಗೆ 2.5 ಕೋಟಿ ರೂ. ಹಣ ಹಾಕಿದ್ದಾರೆ. ಆದರೆ ಆರು ತಿಂಗಳು ಕಳೆದರೂ, ಸಿನಿಮಾ ವಿಷಯ ಮುಂದುವರಿಯದಿದ್ದಾಗ ಅಜಯ್ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ. ನಂತರ ಅಮೀಶಾ ಪಟೇಲ್ ಅಜಯ್ ಅವರನ್ನು ಮುಂಬೈಗೆ ಕರೆಸಿ 2.5 ಕೋಟಿ ಮತ್ತು 50 ಲಕ್ಷದ ಎರಡು ಚೆಕ್ಗಳನ್ನು ನೀಡಿದ್ದಾರೆ. ಆ ಎರಡೂ ಚೆಕ್ಗಳು ಬೌನ್ಸ್ ಆದ ಹಿನ್ನೆಲೆ, ಅಜಯ್ ಕಾನೂನಿನ ಮೊರೆ ಹೋಗಿದ್ದಾರೆ'' ಎಂದು ತಿಳಿಸಿದ್ದಾರೆ.
ವಕೀಲರಾದ ವಿಜಯ ಲಕ್ಷ್ಮಿ ಶ್ರೀವಾಸ್ತವ ಅವರು ಈ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದು, ''ಈ ಪ್ರಕರಣದ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಇತ್ತೀಚೆಗೆ ನಟಿ ವಿರುದ್ಧ ವಾರಂಟ್ ಹೊರಡಿಸಿತು. ನಂತರ ಅಮೀಶಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು. ಆ ಸಮಯದಲ್ಲಿ, ನ್ಯಾಯಾಲಯವು ಅವರಿಗೆ ಸಂಧಾನ ಪ್ರಕ್ರಿಯೆಯ ಆಯ್ಕೆಯನ್ನು ಸಹ ನೀಡಿತು. ಆದರೆ ಅವರು ಅದನ್ನು ಸ್ವೀಕರಿಸರಿರಲಿಲ್ಲ. ಈ ಹಿನ್ನೆಲೆ ಇಂದು (ಜುಲೈ 26) ಸಾಕ್ಷಿ ವಿಚಾರಣೆ ನಡೆಯಬೇಕಿತ್ತು.
ಇದನ್ನೂ ಓದಿ:RRR 2: ಆಫ್ರಿಕಾದಲ್ಲಿ ನಡೆಯಲಿದೆ ಆರ್ಆರ್ಆರ್ ಸೀಕ್ವೆಲ್ ಕಥೆ - ಸ್ಕ್ರಿಪ್ಟ್ ಕೆಲಸ ಚುರುಕು!
ಸಾಕ್ಷ್ಯಾಧಾರ ವಿಚಾರಣೆ ವೇಳೆ ಅಮೀಶಾ ಪರ ವಕೀಲ ಜಯಪ್ರಕಾಶ್ ಅವರು ತನಗೆ ಕೆಲ ಪ್ರಮಾಣೀಕೃತ ಪ್ರತಿಗಳ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹಾಗಾಗಿ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಬೇಕಾಯಿತು. ಅರ್ಜಿದಾರ ಅಜಯ್ ಪರವಾಗಿ ಸಾಕ್ಷಿಗಳನ್ನು ಒದಗಿಸಲಾಯಿತು. ಈ ಹಿನ್ನೆಲೆ ಅಮೀಶಾ ಅವರಿಗೆ 500 ರೂಪಾಯಿ ದಂಡ ವಿಧಿಸಲಾಯಿತು. ಸಾಕ್ಷ್ಯಾಧಾರ ಸಂಬಂಧ ಪರೀಕ್ಷೆಗೆ ನ್ಯಾಯಾಲಯ ಆಗಸ್ಟ್ 7 ರಂದು ದಿನ ನಿಗದಿ ಮಾಡಿದೆ. ಇನ್ನೂ ಅಜಯ್ ಸಿಂಗ್ ಅವರಿಗೆ, ಅಮೀಶಾ ಪಟೇಲ್ ಮತ್ತು ಆಕೆಯ ಸಂಗಾತಿ ಹಣಕ್ಕಾಗಿ ಫೋನ್‌ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಸಹ ಆರೋಪಿಸಲಾಗಿದೆ.