ಚೆಕ್ ಬೌನ್ಸ್ ಮತ್ತು ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ನಟಿ ಅಮೀಶಾ ಪಟೇಲ್ (Ameesha Patel) ಮತ್ತೆ ರಾಂಚಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಸದ್ಯ ಬಾಲಿವುಡ್ ನಟಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಕಳೆದ ವಿಚಾರಣೆಯ ಸಮಯದಲ್ಲಿ, ಜೂನ್ 21 ರಂದು (ಇಂದು) ರಾಂಚಿಯ ಕೆಳ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶಿಸಲಾಗಿತ್ತು.
ಸೂಪರ್ ಹಿಟ್ ಸಿನಿಮಾ 'ಗದರ್' ನಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 17 ರಂದು ರಾಂಚಿ ನ್ಯಾಯಾಲಯದಲ್ಲಿ ಶರಣಾಗಿದ್ದರು. ನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿ ಆದೇಶಿಸಿತ್ತು. ಅಮೀಶಾ ಪಟೇಲ್ ಅವರು ಹಿರಿಯ ವಿಭಾಗದ ನ್ಯಾಯಾಧೀಶ ಡಿ. ಎನ್. ಶುಕ್ಲಾ ಅವರ ಎದುರು ವಿಚಾರಣೆಗೆ ಹಾಜರಾಗಿದ್ದರು. ತಲಾ 10,000 ರೂ.ಗಳ ಎರಡು ಬಾಂಡ್ಗಳನ್ನು ಸಲ್ಲಿಸಿದ ನಂತರ ಜಾಮೀನು ನೀಡಲಾಗಿತ್ತು. ಜೂನ್ 21 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಂದು ಆದೇಶಿಸಲಾಗಿತ್ತು.
ರಾಂಚಿ ಮೂಲದ ಚಲನ ಚಿತ್ರ ನಿರ್ಮಾಪಕ ಅಜಯ್ ಕುಮಾರ್ ಅವರು ನಟಿ ಅಮೀಶಾ ಪಟೇಲ್ ವಿರುದ್ಧ ಚೆಕ್ ಬೌನ್ಸ್ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ ನಟಿ ತಮಗೆ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಿದ್ದಾರೆ. ಈ ದೂರಿನ ಸಂಬಂಧ ನ್ಯಾಯಾಲಯವು ನಟಿಗೆ ಹಲವು ಬಾರಿ ನೋಟಿಸ್ ಕಳುಹಿಸಿತ್ತು. ಆದರೆ ಅಮೀಶಾ ಪಟೇಲ್ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದರು. ಈ ಹಿನ್ನೆಲೆ ನ್ಯಾಯಾಲಯವು ಬಾಲಿವುಡ್ ನಟಿಯ ವಿರುದ್ಧ ವಾರೆಂಟ್ ಹೊರಡಿಸಿತ್ತು. ಜೂನ್ 17ರಂದು ನಟಿ ಸ್ವತಃ ನ್ಯಾಯಾಲಯಕ್ಕೆ ಬಂದು ಶರಣಾದರು.