ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಗಳು ನಡೆಸಿದ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡದ ಖ್ಯಾತ ಕಲಾವಿದನಿಗೆ ಆದ ಅವಮಾನ ಕುರಿತು ಸ್ಯಾಂಡಲ್‌ವುಡ್ ನಟ, ನಟಿಯರು ಸೇರಿದಂತೆ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಭಿಮಾನಿ ಸಂಘಗಳು ಸಜ್ಜನಿಕೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಾ ನಟರು ತಮ್ಮ ಅಭಿಮಾನಿಗಳ ಸಂಘಗಳಿಗೆ ಇತರ ನಟರನ್ನು ಅಥವಾ ಯಾರನ್ನಾದರೂ ಟ್ರೋಲ್ ಮಾಡದಂತೆ ಎಚ್ಚರಿಕೆ ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬೇಡಿ. ಎಲ್ಲಾ ನಿಂದನೆಗಳು ಮತ್ತು ಕೆಟ್ಟ ಪದಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಿವೆ. ಇಂತಹ ಟ್ವಿಟರ್ ಅಕೌಂಟ್ ಅನ್ನು ನಿಷೇಧಿಸಬೇಕು ಎಂದು ಟ್ವಿಟರ್ ಸಂಸ್ಥೆಗೆ ನಟಿ ರಮ್ಯಾ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ಕಲೆಗೆ ಕಲಾವಿದರಿಗೆ ಗೌರವ ಕೊಡುವವರು ಮಾತ್ರ ಅಭಿಮಾನಿಯಾಗಲು ಸಾಧ್ಯ. ಬೇರೆಯವರು ಕನ್ನಡ ಚಿತ್ರರಂಗವನ್ನು ಹೊಗಳುತಿದ್ದರೆ, ನಮ್ಮವರು ಒಡೆದು ಆಳಲು ಹೊರಟಿದ್ದಾರೆ. ಎಲ್ಲಾ ಕನ್ನಡಾಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಇದಾಗಿದೆ. ಪೋಲಿಸ್ ಇಲಾಖೆ ಆ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮಕೈಗೊಳ್ಳಬೇಕು ಎಂದು ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.
ಅಭಿಮಾನ ಅತಿರೇಕ ಆಗದಿರಲಿ. ಯಾವುದೇ ಕಲಾವಿದನಿಗೆ ಅವಮಾನ ಮಾಡುವುದೆಂದರೆ ಕಲೆಗೆ ಅಗೌರವ ತೋರಿದಂತೆ. ಕಲಾಸೇವೆಯಲ್ಲಿರುವ ನಮ್ಮ ದರ್ಶನ್ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಈ ದುಷ್ಕೃತ್ಯ ನಮ್ಮ ಮಣ್ಣಿನ ಸಂಸ್ಕೃತಿಯೂ ಅಲ್ಲ, ಕನ್ನಡತನಕ್ಕೆ ಶೋಭೆಯೂ ಅಲ್ಲ ಎಂದು ನಟ ವಸಿಷ್ಠ ಸಿಂಹ ಟ್ವೀಟ್ ಮಾಡಿದ್ದಾರೆ.
ಎತ್ತ ತಲುಪುತ್ತಿದ್ದೇವೆ ನಾವು? ನಾವೆಲ್ಲರು ಒಂದೇ ಕುಲದವರು ಹೊಡೆದಾಡದಿರಿ. ಜಗತ್ತಿನ ಎಲ್ಲ ಕಲಾವಿದರು ಒಂದೇ. ದರ್ಶನ್ ಅವರ ಮೇಲಿನ ಎಸೆತ ಸರಿಯೇ? ಇದು ಯಾವುದೇ ವ್ಯಕ್ತಿಗಾದರೂ ತಪ್ಪೇ. ನಮ್ಮ ನಮ್ಮಲ್ಲೇ ಕಿತ್ತಾಡೋದು ನಿಲ್ಲಿಸಿ. ಒಬ್ಬರು ಮಾಡೋ ತಪ್ಪು ಎಲ್ಲರಿಗೂ ಅವಮಾನ. ನಾವು ನಿಮ್ಮೊಟ್ಟಿಗಿದ್ದೇವೆ ಸರ್ ಎಂದು ನಟ ಸತೀಶ್ ನಿನಾಸಂ ಟ್ವೀಟ್ ಮಾಡಿದ್ದಾರೆ.
ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ ದರ್ಶನ್ ಮೇಲೆ ನಡೆದಿರುವ ಹಲ್ಲೆ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ. ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಇಟ್ಟ ಈ ಘಟನೆ ಎಸಗಿದವರ ಸಣ್ಣತನ, ಹೇಡಿತನ ಮಾತ್ರ ಬಹಿರಂಗವಾಗಿದೆ. ಇಡೀ ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ ಎಂದು ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಭಾಷೆ ಮತ್ತು ಇಂಡಸ್ಟ್ರಿಗೆ ದರ್ಶನ್ ಕೊಡುಗೆ ಅಪಾರ, ಹೊಸಪೇಟೆ ಘಟನೆ ನನ್ನನ್ನು ಘಾಸಿಗೊಳಿಸಿದೆ: ಕಿಚ್ಚ ಸುದೀಪ್