ಇತ್ತೀಚೆಗಷ್ಟೇ 'ಮಾರ್ಕ್ ಆಂಟೋನಿ' ಚಿತ್ರದ ಮೂಲಕ ಹಿಟ್ ಪಡೆದಿರುವ ಕಾಲಿವುಡ್ ನಟ ವಿಶಾಲ್ ಸದ್ಯ ತಮ್ಮ ಮುಂಬರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಸಿಂಗಂ' ಖ್ಯಾತಿಯ ಹರಿ ನಿರ್ದೇಶನದ 'ರತ್ನಂ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಆದರೆ ಇತ್ತೀಚೆಗಷ್ಟೇ ನ್ಯೂಯಾರ್ಕ್ ಬೀದಿಯಲ್ಲಿ ವಿಶಾಲ್ ಅವರು ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ವಿಶಾಲ್ ಅವರು ಹುಡುಗಿಯ ಜೊತೆ ಕೈ ಹಿಡಿದುಕೊಂಡು ಮಾತಾಡುತ್ತಾ ಹೋಗುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದನ್ನು ಕಂಡ ವಿಶಾಲ್ ಧರಿಸಿರುವ ಸ್ವೆಟರ್ನ ಟೋಪಿಯನ್ನು ತಲೆಗೆ ಮುಚ್ಚಿಕೊಂಡು ಹುಡುಗಿಯ ಕೈ ಹಿಡಿದು ಓಡಿ ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ಇದು ಸಿನಿಮಾ ಪ್ರಚಾರದ ಗಿಮಿಕ್ ಎಂದು ತಳ್ಳಿ ಹಾಕಿದ್ದಾರೆ. ಆದರೆ, ಕ್ಯಾಮರಾ ಕಂಡು ನಟ ಯಾಕೆ ಓಡಿ ಹೋದ್ರು? ಎಂಬುದು ನೆಟ್ಟಿಗರ ಪ್ರಶ್ನೆ.
ಮದುವೆ ವದಂತಿಗೆ ಸ್ಪಷ್ಟನೆ: ಮತ್ತೊಂದೆಡೆ, ಇತ್ತೀಚೆಗೆ ಅವರು ಸ್ಟಾರ್ ನಟಿ ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ಪ್ರತಿಕ್ರಿಯಿಸಿದ್ದರು. "ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಇನ್ನಿತರ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಇದೀಗ ಲಕ್ಷ್ಮಿ ಮೆನನ್ ಜೊತೆಗೆ ನನ್ನ ಮದುವೆಯ ಬಗ್ಗೆ ವದಂತಿಗಳಿವೆ. ಈ ವಿಚಾರವನ್ನು ಸಲೀಸಾಗಿ ಅಲ್ಲಗಳೆಯುತ್ತೇನೆ ಮತ್ತು ಇದು ಸತ್ಯಕ್ಕೂ ದೂರವಾದ ಸುದ್ದಿ" ಎಂದು ಹೇಳಿದ್ದರು.
ಅಲ್ಲದೇ, ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ಮೌನ ಮುರಿದ ಕಾರಣವನ್ನು ನಟ ಬಹಿರಂಗಪಡಿಸಿದ್ದರು. ಹುಡುಗಿಯಾಗಿ ಅವರ ಮೇಲೆ ಕೆಟ್ಟ ಇಮೇಜ್ ಸೃಷ್ಟಿಯಾಗುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರವಾಗಿ ಮಾತನಾಡುತ್ತಿರುವುದಾಗಿ ಅವರು ತಿಳಿಸಿದ್ದರು. "ಅವರೊಬ್ಬ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಹುಡುಗಿ ಎಂಬ ಕಾರಣಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಒಬ್ಬಳು ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಹೀಗೆಲ್ಲಾ ವದಂತಿ ಸೃಷ್ಟಿಸುತ್ತಾ ಅವರ ಖಾಸಗಿತನವನ್ನು ಆಕ್ರಮಿಸಿಕೊಳ್ಳುತ್ತಿದ್ದೀರಿ. ಇದು ನಟಿಯ ಇಮೇಜ್ ಅನ್ನು ಹಾಳು ಮಾಡುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದರು.