ಚೆನ್ನೈ(ತಮಿಳುನಾಡು): ದಿಢೀರ್ ಅನಾರೋಗ್ಯದ ಕಾರಣ ತಮಿಳುನಾಡಿನ ಖ್ಯಾತ ನಟ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಅವರು ಆ್ಯಂಜಿಯೋ ಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದರ ಬೆನ್ನಲ್ಲೇ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪುತ್ರ ಟ್ವೀಟ್ ಮಾಡಿದ್ದು, ನನ್ನ ತಂದೆಗೆ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ತಂದೆಯ ಆರೋಗ್ಯದ ಬಗ್ಗೆ ಸುಳ್ಳು ವದಂತಿ ನಿರಾಕರಿಸುವಂತೆ ಟ್ವೀಟ್ ಮಾಡಿರುವ ಧ್ರುವ್, ಎದೆಯಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡ ಕಾರಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಂದು ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಇಂದು ಸಂಜೆ 6 ಗಂಟೆಗೆ ನಡೆಯಬೇಕಿದ್ದ ಅವರ ಮುಂಬರುವ ಚಿತ್ರ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಟ್ರೇಲರ್ ಕಾರ್ಯಕ್ರಮದಲ್ಲಿ ನಟ ಭಾಗವಹಿಸಬೇಕಾಗಿತ್ತು. ಆದರೆ, ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದೆ.