ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (38) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಪಂದನಾ ಅವರು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ, ಅವರಿಗೆ ಹೃದಯಾಘಾತವಾಗಿದೆ. ಸದ್ಯ ವಿಜಯ ರಾಘವೇಂದ್ರ ಮತ್ತು ಅವರ ತಂದೆ ಚಿನ್ನೇಗೌಡ, ಸಹೋದರ ಶ್ರೀಮುರಳಿ ಹಾಗೂ ಸ್ಪಂದನ ತಂದೆ ಶಿವರಾಮ್ ಬ್ಯಾಂಕಾಕ್ಗೆ ತೆರಳಿದ್ದಾರೆ. ಸ್ಪಂದನಾ ನಿಧನಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು ಮತ್ತು ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್: "ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಡಿಕೆಶಿ ಸಂತಾಪ: "ಕನ್ನಡದ ಖ್ಯಾತ ನಟ ಶ್ರೀ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು" ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಹೆಚ್ಡಿಕೆ ಬೇಸರ: "ಹೃದಯಾಘಾತಕ್ಕೆ ತುತ್ತಾಗಿರುವುದು ನೋವಿನ ಸಂಗತಿ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಕಂಡಿರುವುದು ದುಃಖ ತಂದಿದೆ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಇದೊಂದು ಆಘಾತಕಾರಿ ಘಟನೆ. ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಆಗುತ್ತಿವೆ. ಕೋವಿಡ್ ನಂತರ ಆದ ಕೆಲ ಸಮಸ್ಯೆ, ಮನುಷ್ಯನ ದೇಹದ ಮೇಲೆ ಆಗಿರುವ ಸಮಸ್ಯೆಗಳಿಂದ ಹೀಗೆ ಆಗುತ್ತಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ, ಜಾಗೃತೆಯಿಂದ ಆರೋಗ್ಯದ ಎಚ್ಚರ ವಹಿಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕೆಲಸವೂ ಆಗಬೇಕು. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಕುಟುಂಬದಲ್ಲಿ ದೊಡ್ಡ ನೋವು ತರಿಸಿದೆ. ಆ ನೋವಿನಿಂದ ಹೊರ ಬರೋದು ತುಂಬಾ ಕಷ್ಟ" ಎಂದು ಸ್ಪಂದನಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.