ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಜಗತ್ತಿನಾದ್ಯಂತ ಇಂದು ಅದ್ಧೂರಿಯಾಗಿ ತೆರೆ ಕಂಡಿದೆ. ಚಿತ್ರದ ಹಿಂದಿ ಆವೃತ್ತಿಯೂ ಇಂದು ರಾತ್ರಿ ಬಿಡುಗಡೆಯಾಗಿದೆ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದು, ಚಿತ್ರ ಮಂದಿರಗಳಲ್ಲಿ ಬಾಕ್ಸರ್ ಆಗಿ ಅಬ್ಬರಿಸುತ್ತಿದ್ದಾರೆ. ಸಾಕಷ್ಟು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಸಿನಿಮಾ ಪ್ರಿಯರಿಗೆ ನಟ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ.
ಲೈಗರ್ ಚಿತ್ರದ ಬಗ್ಗೆ ಹೇಳುವುದಾದರೆ, ನಟ ವಿಜಯ್ ದೇವರಕೊಂಡ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅನನ್ಯಾ ಪಾಂಡೆ ಅವರಿಗೆ ಇದು ಮೊದಲ ಬಹುಭಾಷಾ ಚಿತ್ರವಾಗಿದೆ. ಈ ಚಿತ್ರದ ಮೂಲಕ ವಿಜಯ್, ಅನನ್ಯಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ದೇಶಾದ್ಯಂತ ಚಿತ್ರ ತಂಡ ಪ್ರವಾಸ ಕೈಗೊಂಡಿತ್ತು. ವಿಜಯ್ ಮತ್ತು ಅನನ್ಯಾ 34 ದಿನಗಳಲ್ಲಿ 20 ಫ್ಲೈಟ್‌ಗಳ ಮೂಲಕ 17 ನಗರಗಳಲ್ಲಿ ಸುತ್ತಿ ಚಿತ್ರದ ಅದ್ಧೂರಿ ಪ್ರಚಾರ ಮಾಡಿದ್ದಾರೆ. ಇನ್ನೂ ಲೈಗರ್ ಸಿನಿಮಾದ ಮುಂದಿನ ಭಾಗದ ಬಗ್ಗೆಯೂ ಚಿತ್ರತಂಡ ಯೋಚಿಸಿದೆ. ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಟ ವಿಜಯ್ ದೇವರಕೊಂಡ ಸಿನಿಮಾ ಪ್ರಚಾರದ ವೇಳೆ ತಿಳಿಸಿದ್ದರು.
ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳ ಹೂಡಿದ್ದು, ಪುರಿ ಜಗನ್ನಾಥ್ ನಿರ್ದೇಶನವಿದೆ. ಈ ಸಿನಿಮಾ ಮೂಲಕ ಫೇಮಸ್ ಬಾಕ್ಸರ್ ಮೈಕ್ ಟೈಸನ್ ಕೂಡ ಗೆಸ್ಟ್ ರೋಲ್ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಲನಚಿತ್ರವು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿದ್ದು, ಎರಡು ಗಂಟೆ ಇಪ್ಪತ್ತು ನಿಮಿಷದ ಈ ಚಿತ್ರದಲ್ಲಿ ಏಳು ಫೈಟ್‌ಗಳು ಮತ್ತು ಆರು ಹಾಡುಗಳಿವೆ. ಹಿರಿಯ ನಟಿ ರಮ್ಯಾ ಕೃಷ್ಣ ಅವರು ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಸಸ್ಪೆನ್ಸ್ ಥ್ರಿಲ್ಲರ್, ನನ್ನ ಹುಡುಕಿ ಕೊಡಿ ಸಿನಿಮಾಕ್ಕೆ ಚಾಲನೆ
ಇದರ ನಡುವೆ ಲೈಗರ್ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಕೂಡ ನಡೆಯುತ್ತಿದೆ. ಚಿತ್ರಕ್ಕೆ ಧರ್ಮ ಪ್ರೊಡಕ್ಷನ್, ಕರಣ್ ಜೋಹರ್ ಬೆಂಬಲವಿರುವ ಹಿನ್ನೆಲೆ ಲೈಗರ್ ನಿಷೇಧಕ್ಕೆ ಬೆಂಬಲ ಕೊಡುತ್ತೇವೆಂದು ಹಲವರು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಕೇಳಿ ಬಂದಿದೆ ಎಂದು ಆರೋಪಿಸಿ ಲೈಗರ್ ನಿಷೇಧಕ್ಕೆ ಹಲವರು ಒತ್ತಾಯಿಸಿದ್ದಾರೆ. ಜೊತೆಗೆ ಈಗಾಗಲೇ ಬಾಯ್ಕಾಟ್ ಬಿಸಿ ತಾಗಿದ್ದ ಸಿನಿಮಾಗಳಿಗೆ ನಟ ವಿಜಯ್ ದೇವರಕೊಂಡ ಬೆಂಬಲ ವ್ಯಕ್ತಪಡಿಸಿದ್ದು ಕೂಡ ಒಂದು ಕಾರಣ. ಆದರೆ ವಿಜಯ್ ದೇವರಕೊಂಡ ಮಾತ್ರ ಸಕಾರಾತ್ಮಕವಾಗಿ ಮುನ್ನುಗ್ಗುತ್ತಿದ್ದು, ಎಷ್ಟರ ಮಟ್ಟಿಗೆ ಚಿತ್ರ ಯಶಸ್ವಿ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.