ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗು ಅನನ್ಯಾ ಪಾಂಡೆ ಅಭಿನಯದ ಬಹುನಿರೀಕ್ಷಿತ ಚಿತ್ರ ಲೈಗರ್ ಸದ್ಯ ಟ್ರೈಲರ್ ಹಾಗು ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ತಿಂಗಳು 25ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಲೈಗರ್ ಚಿತ್ರದ ಪ್ರಚಾರ ಸಲುವಾಗಿ ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ, ಖಳ ನಟನಾಗಿ ನಟಿಸಿರೋ ವಿಶ್ ರೆಡ್ಡಿ ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಮೊದಲಿಗೆ ಕನ್ನಡದಲ್ಲಿ ಎಲ್ಲರೂ ಚೆನ್ನಾಗಿದ್ದೀರಾ ಅಂತಾ ಮಾತು ಶುರು ಮಾಡಿದ ನಟ ವಿಜಯ್ ದೇವರಕೊಂಡ, ಪಾತ್ರಕ್ಕಾಗಿ ಹೆಚ್ಚು ಒತ್ತು ಕೊಡಬೇಕಾಯಿತು. ಬಾಕ್ಸರ್ ಕ್ಯಾರೆಕ್ಟರ್ಗೆ ತುಂಬಾ ಸಿದ್ಧತೆ ಮಾಡಿದ್ದೆ. ಈ ಕಾರಣಕ್ಕೆ ನನಗೆ ಡಬ್ಬಿಂಗ್ ಮಾಡಲು ಆಗಿಲ್ಲ. ಮುಂದಿನ ಸಿನಿಮಾಗೆ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದು ತಿಳಿಸಿದರು.
ಇದರ ಜೊತೆಗೆ ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ವಿಜಯ್ ಮೆಲುಕು ಹಾಕಿದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆ ಅಂತಾ ರಾಜ್ಕುಮಾರ್ ಕುಟುಂಬದೊಂದಿಗೆ ಇರುವ ಬಾಂಧವ್ಯದ ಬಗ್ಗೆ ತಿಳಿಸಿದರು.