ಟೈಟಲ್ ಮತ್ತು ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಹವಾ ಸೃಷ್ಟಿಸಿರೋ ಸಿನಿಮಾ ಹೆಡ್ಬುಷ್. ಈ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರ ಮಾಡಿರುವ ಡಾಲಿ ಧನಂಜಯ್ ಅಲ್ಲದೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ದೇವರಾಜ್ ಹೀಗೆ ದೊಡ್ಡ ತಾರಾ ಬಳಗವೇ ಇದೆ. ಹೆಡ್ ಬುಷ್ ಬಿಡುಗಡೆಗೆ ಇನ್ನೆರಡು ದಿನ ಬಾಕಿ ಇದ್ದು, ಈ ಚಿತ್ರದಲ್ಲಿ ಕೊತ್ವಾಲ್ ಪಾತ್ರ ಮಾಡಿರೋ ನಟ ವಸಿಷ್ಠ ಸಿಂಹ ಅವರು ಈಟಿವಿ ಭಾರತ ಜೊತೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾನು ಮತ್ತು ಧನಂಜಯ್ ಬಹಳ ವರ್ಷಗಳ ಗೆಳೆಯರು. ಒಟ್ಟಿಗೆ ಸಿನಿಮಾ ಮಾಡಿದ ಮೇಲೆ ಮತ್ತಷ್ಟು ಆತ್ಮಿಯರಾದೆವು. ಟಗರು ಸಿನಿಮಾದಲ್ಲಿ ಡಾಲಿ ಮತ್ತು ಚಿಟ್ಟೆ ಪಾತ್ರಕ್ಕೆ ಒಂದು ವ್ಯಾಲ್ಯೂ ಇದೆ. ಈ ಸಿನಿಮಾ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಾನು ಮತ್ತು ಧನಂಜಯ್ ಒಟ್ಟಿಗೆ ನಟಿಸಬೇಕು ಅಂತಾ ಸಾಕಷ್ಟು ಆಫರ್ಗಳು ಬಂದವು. ಆದರೆ ನಾವು ಒಪ್ಪಿಕೊಂಡಿರಲಿಲ್ಲ. ಏಕೆಂದರೆ ಡಾಲಿ ಮತ್ತು ಚಿಟ್ಟೆ ಪಾತ್ರಕ್ಕೆ ಅಷ್ಟು ಮಹತ್ವ ಇತ್ತು. ಈ ಕಾರಣಕ್ಕೆ ಸಾಕಷ್ಟು ಸಿನಿಮಾಗಳ ಆಫರ್ ಬಿಟ್ಟಿದ್ದೇವೆ. ಆದರೆ ಹೆಡ್ಬುಡ್ ಸಿನಿಮಾ ಮೂಲಕ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಸಂದರ್ಭ ಕೂಡಿ ಬಂತು.
ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ಹೇಳುವ ಕಥೆಯಿದು. ಒಂದು ರೌಡಿಸಂ ಕಥೆ ಅಂತಾ ಬಂದಾಗ ಅದನ್ನು ಮನೋರಂಜನೆಯಾಗಿಯೂ ನೋಡುತ್ತೇವೆ. ಜಯರಾಜ್ ಆಗಿ ಧನಂಜಯ್, ಗಂಗಾ ಆಗಿ ಯೋಗಿ, ಕೋತ್ವಾಲ್ ಆಗಿ ನಾನು ಪಾತ್ರಗಳನ್ನು ನಿರ್ವಹಿಸಿದ್ದೇವೆ. ಗೆಳಯನ ಸಿನಿಮಾ ಅಂತಾ ಬಂದಾಗ ನಾವೆಲ್ಲ ಒಟ್ಟಿಗೆ ಇರಬೇಕು. ಈ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ಇದ್ದೇನೆ ಎಂದರು.
ಇನ್ನು, ಅಗ್ನಿ ಶ್ರೀಧರ್ ಅವರು ಕಥೆ ಹೇಳಿದಾಗ ನಾನು ತುಂಬಾನೇ ಎಕ್ಸೈಟ್ ಆಗಿ ಒಪ್ಪಿಕೊಂಡೆ. ಶ್ರೀಧರ್ ಸರ್ ಪುಸ್ತಕದಲ್ಲಿ ಇಲ್ಲದೇ ಇರುವ ಕೆಲ ವಿಷ್ಯಗಳು ಈ ಸಿನಿಮಾದಲ್ಲಿವೆ. 1986ರಲ್ಲಿ ಜಯರಾಜ್ ಹಾಗು ಕೊತ್ವಾಲ್ ನಡುವೆ ಯಾವ ಮಟ್ಟಿಗೆ ಗ್ಯಾಂಗ್ ವಾರ್ ಇತ್ತು ಎಂಬುದು ನಮಗೆ ಗೊತ್ತಿದೆ. ಇದು 70ರ ದಶಕದಲ್ಲಿ ನಡೆದ ಕಥೆ. ಈ ಸಿನಿಮಾದಲ್ಲಿ ಬರುವ ಒಂದೊಂದು ಪಾತ್ರಗಳನ್ನು ಆ ವ್ಯಕ್ತಿಗಳೇ ಎಂಬ ಮಟ್ಟದಲ್ಲಿ ಕಾಸ್ಟೂಮ್ ಹಾಗು ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದರು.