ತೆಲುಗು ನಟ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಮದುವೆ ವಿಚಾರ ಸದ್ಯ ಟಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರು ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಜೂನ್ 9 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಅದರಂತೆ ಈ ಜೋಡಿ ನಾಳೆ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ.
ಹೌದು. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಎಂಗೇಜ್ಮೆಂಟ್ ನಾಳೆ ಹೈದರಾಬಾದ್ನಲ್ಲಿ ನಡೆಯಲಿದೆ. ನಟ ನಾಗಬಾಬು ಪುತ್ರನ ನಿಶ್ಚಿತಾರ್ಥ ಪ್ರೀತಿಸಿದ ಹುಡುಗಿಯ ಜೊತೆಗೆ ಅದ್ದೂರಿಯಾಗಿ ಜರುಗಲಿದೆ. ನಿರ್ದೇಶಕ ಏಲೂರು ಶ್ರೀನು ನಿಶ್ಚಿತಾರ್ಥ ಆಮಂತ್ರಣದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ತಾರಾ ಜೋಡಿಗೆ ಶುಭ ಹಾರೈಸಿದ್ದಾರೆ. "ಮೆಗಾ ಪ್ರಿನ್ಸ್ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರಿಗೆ ಅಭಿನಂದನೆಗಳು. ಯಾವಾಗಲೂ ಜೊತೆಯಾಗಿರಿ" ಎಂದು ಕ್ಯಾಪ್ಶನ್ ನೀಡಿದ್ದಾರೆ.
ಆಮಂತ್ರಣ ಪತ್ರದಲ್ಲಿ ಲಾವಣ್ಯ ತ್ರಿಪಾಠಿ ಅವರು ವರುಣ್ ತೇಜ್ ಭುಜದ ಮೇಲೆ ಒರಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆಗಿದೆ. ಈ ಮೂಲಕ ವರುಣ್, ಮದುವೆ ಬಗ್ಗೆ ಎಲ್ಲ ಮೆಗಾ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ಗಣ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.
ಸ್ನೇಹದಿಂದ ಪ್ರೀತಿಯೆಡೆಗೆ.. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 'ಮಿಸ್ಟರ್' ಮತ್ತು 'ಅಂತರಿಕ್ಷಂ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾಗಳ ಶೂಟಿಂಗ್ ವೇಳೆಯೇ ಇಬ್ಬರ ನಡುವೆ ಸ್ನೇಹ ಚಿಗುರಿ ಪ್ರೀತಿಗೆ ತಿರುಗಿತ್ತು. ಅಂದಿನಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಪ್ರಚಾರವೂ ಜೋರಾಗಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ಬಾರಿ ಕೇಳಿಬಂದಿತ್ತು.